Tuesday, December 17, 2019

ಬಸ್ಸು ಬರಲಿಲ್ಲ ಅಂತ ರಿಕ್ಷಾ ಹತ್ತಿದೆ

ನಾವು ಶಾಲೆಯಲ್ಲಿ ಓದುವಾಗ , ಒಂದು ವಾಕ್ಯವನ್ನು ಕೊಟ್ಟು ಸಂದರ್ಭ ಸಹಿತ ವಿವರಿಸಿ  ಎಂದು ಕೇಳುತ್ತಿದ್ದದು.  ಮೇಲಿನ ವಾಕ್ಯಕ್ಕೆ ಅದನ್ನೇ ಬರೆಯ ಹೊರಟಿದ್ದೇನೆ.
ಒಮ್ಮೆ,  ದ. ರಾ. ಬೇಂದ್ರೆ  ಅವರು ಬೆಂಗಳೂರಿಗೆ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದರು. ದೊಡ್ಡರಂಗೇ ಗೌಡರು  ಬೇಂದ್ರೆ ಅವರನ್ನು  ರೈಲು ನಿಲ್ದಾಣದಿಂದ   ಕರೆದು ಕೊಂಡು  ಬರಲು ಹೋದರು.  ಅಲ್ಲಿ ಬೇಂದ್ರೆ ಅವರು ಕಾಣಲಿಲ್ಲ. ಆಗ ತಾನೇ ರೈಲು ಬಂದು ಹೊರಟು  ಹೋಗಿತ್ತು. ಗೌಡರಿಗೆ ಗಾಭರಿಯಾಗಿ ಬಸ್ ನಿಲ್ದಾಣಕ್ಕೆ ಹೋದಾಗ, ಅಲ್ಲಿ ಬೇಂದ್ರೆ ಅವರು ಒಂದು ಕಾಗದದಲ್ಲಿ ಏನೋ ಬರೆದುಕೊಳ್ಳುತ್ತಿದ್ದರು.  ನಂತರ ಆ ದಿನದ ಕಾರ್ಯಕ್ರಮ ಶುರುವಾದಾಗ ಬೇಂದ್ರೆ ಅವರು ತಮ್ಮ  ಬೆಳಗಿನ ಅನುಭವವನ್ನು ಹೇಳುತ್ತಾ ಮೇಲಿನ ವಾಕ್ಯವನ್ನು ಬಿಡಿ  ಬಿಡಿಯಾಗಿ ಹೇಳಿದರು. ಯಾರಿಗೂ ಅರ್ಥ ಆಗಲಿಲ್ಲ. ಇದೇನಪ್ಪ.. ಬಸ್ ಬರಲಿಲ್ಲ ಅಂದ್ರೆ  ರಿಕ್ಷಾ ಹತ್ತೋದು, ಇದರಲ್ಲೇನಿದೆ ಅಂದುಕೊಂಡರಂತೆ. ನಂತರ ಬೇಂದ್ರೆ ಅವರು ಮತ್ತೆ ಹೇಳಿದರಂತೆ,  "ಬಸ್ಸು ಬರಲಿಲ್ಲ...  ಅಂತರಿಕ್ಷಾ ಹತ್ತಿದೆ". ಈಗ ಅರ್ಥ ಆಯಿತಾ. ಅವರು ಬಸ್ಸಿಗಾಗಿ ಕಾಯುತ್ತ ಅಂತರಿಕ್ಷ ಹತ್ತಿದ್ದರು.. ಭಾವನಾ ಲೋಕದಲ್ಲಿ ಹೊಸ ಕವಿತೆಯ ಅನ್ವೇಷಣೆ ಮಾಡುತ್ತಿದ್ದರು. ಅದಕ್ಕೆ ಹೇಳೋದು ಬೆಂದರೆ ಬೇಂದ್ರೆ  ಆಗುತ್ತಾರೆ ಅಂತ . ಅಲ್ಲ ... ಬೆಂದು ಬೆಂದು ಬೇಂದ್ರೆ  ಆದರು.
ಈ ಘಟನೆಯನ್ನು  ದೊಡ್ಡರಂಗೇ ಗೌಡರು ಮೊನ್ನೆ ರವೀಂದ್ರ ಕಲಾಕ್ಷೇತ್ರ ದಲ್ಲಿ  ಪ್ರಣತಿ ಪ್ರತಿಷ್ಠಾನದವರು ಹಮ್ಮಿಕೊಂಡಿದ್ದ   ಕವಿಗೋಷ್ಠಿಯಲ್ಲಿ ಬೇಂದ್ರೆ ಅವರನ್ನು ಸ್ಮರಿಸಿದ ಪರಿ.
ಕವಿತಾ ವಿ ರಾವ್ . 

No comments:

Post a Comment