Sunday, December 15, 2019

ಭೀಮ


ಪ್ರತಿನಿತ್ಯದಂತೆ ಅಂದು ನಾನು ದ್ವಿಚಕ್ರ ವಾಹನ ಹತ್ತಿ ಕಚೇರಿಗೆ ತೆರಳುತ್ತಿದ್ದೆ.   ದಾರಿಯಲ್ಲಿ ಒಂದು ತಿರುವು, ಅಲ್ಲಿ  ನಿತ್ಯ ಕೆಲವು ಸರ್ಕಾರಿ ಶಾಲೆಯ ಮಕ್ಕಳು  ಲಿಫ್ಟ್ ಕೇಳುವುದುಂಟು. ಅವರನ್ನು ಕಂಡರೆ ನನಗೆ ಎಲ್ಲಿಲ್ಲದ ಕೋಪ . ನಾವು ಸಣ್ಣವರಾಗಿದ್ದಾಗ ಶಾಲೆಗೆ ಕಾಲು ನಡಿಗೆಯೆಲ್ಲೆ ಹೋಗುತ್ತಿದ್ದುದು. ೧-೨ ಕಿ.ಮೀ ದೂರ ಇದ್ದರೂ, ಸ್ನೇಹಿತರೊಡನೆ ಹರಟೆ ಹೊಡೆಯುತ್ತಾ
ನಡೆಯುತ್ತಿದ್ದೆವು. ಈಗಿನ ಕಾಲದ ಮಕ್ಕಳಿಗೆ ನಡೆಯುವುದಕ್ಕೆ ಸೋಮಾರಿತನ. ಇದರಿಂದ ಇನ್ನೊಂದು ಸಮಸ್ಯೆಯೇನೆಂದರೆ, ಈ  ಮಕ್ಕಳು  ಬಾಲ್ಯದಿಂದಲೇ ಇನ್ನೊಬ್ಬರ ಮೇಲೆ  ಆಧಾರವಾಗುವುದು. "ಯಾರೋ ನನಗೆ ಸಹಾಯ ಮಾಡ್ತಾರೆ "  ಅಂತ  ನಿರೀಕ್ಷಿಸೋದು. ಇವರು ಸ್ವಾವಲಂಬಿಗಳಾಗೋದು ಯಾವಾಗ? ಸರಿ ನಮ್ಮ ಮಕ್ಕಳೇನಾದರೂ ನಡಿತಾರಾ ಅಂದ್ರೆ, ಅವರೂ ಸೋಮಾರಿಗಳೇ. ಮಳೆ ಬಂದು ರಸ್ತೆ ಕೆಸರಾಗಿದ್ದಾಗ ದ್ವಿಚಕ್ರ ವಾಹನದಲ್ಲಿ ನನ್ನ ಹಿಂದೆ ಕುಳಿತಿರುತ್ತಿದ್ದ ನನ್ನ ಮಕ್ಕಳು ಮನೆ ಬರುವತನಕ ಇಳಿಯುತ್ತಿರಲಿಲ್ಲ. ಕಾಲ ಬದಲಾಗಿ, ನಮ್ಮ ಮಕ್ಕಳಿಗಿರುವ ಸೌಕರ್ಯ ಇವರಿಗೆ ಯಾಕೆ ಕೊಡಬಾರದು ಅಂತ ಒಂದು ದಿನ ಒಬ್ಬ ೭ ನೇ ತರಗತಿಯ ಹುಡುಗನಿಗೆ ಲಿಫ್ಟ್ ಕೊಟ್ಟೆ. ಅವನು ನನ್ನ ವಾಹನ ಹತ್ತಿದ, ನಾನು  ನನ್ನ ಧಾಟಿಯಲ್ಲಿ
"ಏನಪ್ಪಾ ನಿನ್ನ ಹೆಸರು" ಎಂದೆ . ತನ್ನ ಹೆಸರು ಭೀಮೇಶ್ವರ ಅಂತ ಹೇಳಿದ. ನಿನ್ನ ಹೆಸಿರಿನ ಅರ್ಥ ಗೊತ್ತಾ ಎಂದು ಮರು ಪ್ರಶ್ನೆ ಹಾಕಿದೆ . ದೇವರ ಹೆಸರು ಎಂದ. ನನಗೆ ಮಹಾಭಾರತ ಭೀಮ ಗೊತ್ತಿತ್ತು, ನಾನೇನೋ ಮಹಾಭಾರತವನ್ನು ಅರಿದು ಕುಡಿತಂತೆ ಭೀಮ ಯಾರು ಗೊತ್ತಾ , ಭೀಮನ ಕತೆ ಕೇಳಿದೆಯಾ ಎಂದೆ . ನಮ್ಮ ಮನೇಲಿ ಟಿವಿ ಇಲ್ಲ ಅಂತ ಹೇಳಿದ. ಶಾಲೆಯಲ್ಲಿ ಟೀಚರ್ ಈ ಕತೆ ಹೇಳಿಲ್ವ ಅಂತ ಕೇಳಿದ್ದಕ್ಕೆ  "ಆ ಪಾಠ ಮಾಡುವಾಗ ನಾನು ಶಾಲೆಗೇ ಹೋಗಿರಲಿಲ್ಲ" ಅಂದುಬಿಟ್ಟ. ನನಗೆ ಸಿಕ್ಕಿದ್ದೇ ಅವಕಾಶ ಅಂತ ... " ಮಹಾಭಾರತದಲ್ಲಿ ಪಾಂಡವರು  ಐದು ಮಂದಿ ಅದರಲ್ಲಿ ಎರಡನೆಯವ ಭೀಮ ... ನಿನ್ನ ಟೀಚರ್ ಹತ್ರ ಕೇಳಿ ಮಹಾಭಾರತದ ಕತೆ ತಿಳಿದುಕೋ" ಅಂತ ಚೆನ್ನಾಗಿ ಕೊರೆದು ಬಿಟ್ಟೆ. ಇನ್ನೊಮ್ಮೆ ನನ್ನನ್ನು ಕಂಡ್ರೆ ಓಡಿ  ಹೋಗ್ತಾನೋ ಏನೋ.  ಆದರೆ ನನಗೆ ಇಲ್ಲಿ ಅರ್ಥ ಆದದ್ದು ಒಂದು ವಿಷಯ. ನನಗೆ ಗೊತ್ತಿದ್ದ ಭೀಮ ಬೇರೆ, ಭೀಮೇಶ್ವರ ಅಂದ್ರೆ  ಶಿವನ ರೂಪ, ಭೀಮಶಂಕರ ಶಿವನ ದ್ವಾದಶ ಲಿಂಗಗಳಲ್ಲಿ ಒಂದು. ಭೀಮ ಹನುಮಂತನಂತೆ ವಾಯುಪುತ್ರನಾದರೂ ಶಿವನ ಅಂಶ. ಕರ್ನಾಟಕದಲ್ಲಿ ಭೀಮೇಶ್ವರ ದೇವಸ್ಥಾನಗಳಿವೆ.  ಭೀಮನಿಗೆ ಆ ಹೆಸರು ಬಂದದ್ದು ಈಶ್ವರನಿಂದ.
ನಮಗೆ ತಿಳಿದಿರೋ ಅಲ್ಪ ಜ್ಞಾನಕ್ಕೆ  ಎಲ್ಲಾ ತಿಳಿದಿರುವಂತೆ ಬೀಗುತ್ತೇವೆ. ಎಲ್ಲಿಯ ತನಕ "ಆಹಂ" , " ಮಮ" ಶಬ್ದಗಳನ್ನು ಬಿಡುವುದಿಲ್ಲವೋ, ಅಲ್ಲೀತನಕ ನಾವು ಉದ್ಧಾರ ಆಗೋದಿಲ್ಲ.  ಕನಕದಾಸರು ಹೇಳುವಂತೆ " ಸ್ವರ್ಗಕ್ಕೆ  'ನಾನು' ಹೋದರೆ ಹೋದೆನು".  ಎಷ್ಟು ನಿಜ!!!! ನಾನು ಇರುವ ತನಕ ಈ 'ನಾನು' ವನ್ನು ಕಟ್ಟಿಕೊಂಡು ತಿರುಗುತ್ತೇವೆ.

ಕವಿತಾ ವಿ. ರಾವ್












No comments:

Post a Comment