Saturday, February 28, 2009

ಡ್ರೈವಿಂಗ್ ಲೈಸೆನ್ಸ್

ನಿನ್ನೆ ರಾತ್ರಿ ಸರಿಯಾಗಿ ನಿದ್ದೆ ಇಲ್ಲ ಕಾರಣ ಇಷ್ಟೇ ಇಂದು ನನಗೆ ಡ್ರೈವಿಂಗ್ ಟೆಸ್ಟ್ . ಇಂದು ಬೆಳಗ್ಗೆ 4.30 ಕ್ಕೆ ಎದ್ದು ಹೊರಗೆ ಸ್ವಲ್ಪ ಕತ್ತಲೆ ಇದ್ದದ್ದರಿಂದ ಬೆಳಕು ಬರುವವರೆಗೂ ಕಾದೆ, ಕಾರನ್ನು ಹೊರಗೆ ತೆಗೆದು ರಿವರ್ಸ್ ಡ್ರೈವಿಂಗ್ ಪ್ರಾಕ್ಟೀಸ್ ಮಾಡಿದೆ. 9.30 ಕ್ಕೆ ಡ್ರೈವಿಂಗ್ ಸ್ಕೂಲ್ ಹತ್ತಿರ ನನ್ನ ಪತಿ ರಾಯರು ನನ್ನನ್ನು ಬಿಟ್ಟು ಹೋದರು. 'ಮುಂದೆ ನಾನೇ ನೋಡಿಕೊಳ್ಳುತ್ತೇನೆ ನೀವು ಆಫೀಸಿಗೆ ಹೋಗಿ' ಎಂದು ಅವರನ್ನು ಕಳುಹಿಸಿದೆ . ಡ್ರೈವಿಂಗ್ ಸ್ಕೂಲಲ್ಲಿ ಕೆಲವು ಅರ್ಜಿ ಗಳನ್ನೂ ಭರ್ತಿ ಮಾಡಿದ ನಂತರ ನನ್ನ ಟ್ಯೂಟರ್ 'ಆರ್.ಟಿ.ಓ. ಆಫೀಸಿಗೆ ಹೋಗಿ' ಎಂದರು. "ನಾನೇ ಅಲ್ಲಿ ತನಕ ಡ್ರೈವ್ ಮಾಡಬೇಕು!!! " ಸ್ವಲ್ಪ ಭಯವಾಯಿತು , ಆದರು ಹೊರಟೆ ಬಿಟ್ಟೆ. 3 ಜನ ಡಿ.ಎಲ್. ಗೆ ಹೋಗುವವವರನ್ನು ನನ್ನ ಜೊತೆ ಕಳುಹಿಸಿದರು. ಅವರಿದ್ದದ್ದರಿಂದ ಸ್ವಲ್ಪ ಧೈರ್ಯ ಬಂದಿತ್ತು . ಆದರೂ ನನ್ನ ಪತಿ ರಾಯರಿಗೆ ಪದೇ ಪದೇ ಪೋನ್ ಮಾಡುತ್ತಲೇ ಇದ್ದೆ. ಅವರೂ ಸಹ ನನಗೆ ಪೋನ್ ಮಾಡುತ್ತಲೇ ಇದ್ದರು. ಆರ್.ಟಿ.ಓ. ಆಫೀಸಿಗೆ ಹೋದ ನಂತರ ಮತ್ತೆ ಪೋನ್ ಮಾಡಿ " ನನ್ನ ಪರಿಚಯದವರು ಒಬ್ಬರು ಅಲ್ಲಿ ಇದ್ದಾರೆ, ನಾರಾಯಣ್ (ಹೆಸರು ಬದಲಿಸಿದೆ) ಅಂತ , ಅವರಲ್ಲಿ ಒಮ್ಮೆ ಮಾತನಾಡು, ನಿನ್ನ ಹೆಸರು , ಡ್ರೈವಿಂಗ್ ಸ್ಕೂಲ್ ಹೆಸರು ಹೇಳು , ಏನಾದರೂ ಸಹಾಯ ಮಾಡಬಹುದು " ಎಂದು ಅವರ ಪೋನ್ ನಂಬರನ್ನು ಕೊಟ್ಟರು. ನಾನು ಅವರಿಗೆ ಕರೆ ಮಾಡಿ ನನ್ನ ಪರಿಚಯ ಮಾಡಿಕೊಂಡೆ . ನಾರಾಯಣ್ ಅವರು ನನಗೆ ಬರುವ ಆರ್.ಟಿ.ಓ. ಅಪೀಸರಿಗೆ ನನ್ನ ಬಗ್ಗೆ ಹೇಳುತ್ತಾರೆ, ನನ್ನ ಕೆಲಸ ಸುಲಭ ಎಂದು ಮನಸಿನಲ್ಲೇ ಲೆಕ್ಕಾಚಾರ ಹಾಕುತ್ತಾ ಇದ್ದೆ. ನಮ್ಮ ಡ್ರೈವಿಂಗ್ ಸ್ಕೂಲ್ ನಿಂದ ಬಂದವರೆಲ್ಲರ ಜೊತೆ ನಾನೂ ಕಾಯುತ್ತಾ (ಸ್ವಲ್ಪ ಹೆದರುತ್ತಲೇ )ನಿಂತಿದ್ದೆ. ಒಂದು ವಾರದಿಂದ ಪ್ರಾಕ್ಟೀಸ್ ಆಗಲೀ ಅಂತ ಕಾರನ್ನು ಆಫೀಸಿಗೆ ತೆಗೆದುಕೊಂಡು ಹೋಗುತ್ತಿದ್ದೇನೆ. ನನ್ನ ಗೆಳೆಯರ ಸಹಾಯದಿಂದ ಓಡಿಸುತ್ತಿದ್ದೆ. ಕಾರ್ ಕಲಿಯುವಾಗ ಸಾಮನ್ಯ ವಾಗಿ ಮಾಡುವ ಎಲ್ಲಾ ತಪ್ಪುಗಳನ್ನು ಮಾಡುತ್ತಿದ್ದೆ. ರಸ್ತೆ ಗಳಲ್ಲಿ ಬೇರೆ ವಾಹನಗಳು ಪಕ್ಕದಲ್ಲೇ ಹೋಗುವಾಗ ಹೆದರಿಕೆ, ಎಲ್ಲರಿಂದ ಮುಖ್ಯವಾಗಿ ಬಿ.ಟಿ.ಸಿ. ಬಸ್ ಡ್ರೈವರ್ ಗಳಿಂದ ಬೈಗಳು ತಿಂದದ್ದು ಆಯಿತು. ನನಗೆ ಡ್ರೈವಿಂಗ್ ಕಲಿಸುವ ಮುನ್ನ ನನ್ನ ಟ್ಯೂಟರ್, "ಎಲ್ಲರೂ ಮೊದಲು ತಪ್ಪುಗಳನ್ನು ಮಾಡುತ್ತಲೇ ಕಲಿಯುತ್ತಾರೆ, ನಾನು ಸರಿಯಾಗಿ ಓಡಿಸುತ್ತಿಲ್ಲ , ನನಗೆ ಓಡಿಸಲು ಬರುವುದಿಲ್ಲ ಎಂಬ ಅಂಜಿಕೆ ಬಿಟ್ಟು ಕಲಿಯಿರಿ " ಎಂದು ಹೇಳಿದ್ದ .
ನನ್ನ ಹೆದರಿಕೆ ಇನ್ನೂ ಕಡಿಮೆಯಾಗಿರಲಿಲ್ಲ, ಆಫೀಸರು ಬಂದೇ ಬಿಟ್ಟರು . ನಾನು ನನ್ನ ಕಾರಲ್ಲಿ ಕುಳಿತೆ, ನನ್ನ ಹಿಂದಿನ ಸೀಟಿನಲ್ಲಿ ಅವರು ಕುಳಿತರು, ನನ್ನ ಅರ್ಜಿಯನ್ನು ಪರಿಶೀಲಿಸುತ್ತಾ " ವಲ್ಲೀಶ್ ಅವರ ಮಿಸ್ಸಸ್ಸಾ " ಎಂದರು. ಹೌದು ಎಂದೆ. ನಾರಾಯಣ್ ಅವರು ನನ್ನ ಪರಿಚಯ ಕೊಟ್ಟಿದ್ದಾರೆ ಎಂದು ಸ್ವಲ್ಪ ಧೈರ್ಯ ದಿಂದ ಅವರು ಹೇಳಿದ ಹಾಗೆ ಓಡಿಸಿ ತಂದು ನಿಲ್ಲಿಸಿದೆ. 'ರಿವರ್ಸ್ ಹೋಗಬೇಕಾ?' ಎಂದು ನಾನೇ ಕೇಳಿದೆ , ' ಇಲ್ಲ ನೀವು ಹೋಗಿ ಅಮ್ಮ' ಎಂದರು. ನನಗೆ ಅರ್ಥವಾಗಲಿಲ್ಲ, ಕೆಳಗಿಳಿದು ನನ್ನ ಟ್ಯೂಟರ್ ನ ಕೇಳಿದೆ . ಆತ ' ಇನ್ನೊಂದು ನಾಲ್ಕು ದಿನಗಳಲ್ಲಿ ನಿಮಗೆ ಲೈಸೆನ್ಸ್ ಸಿಗುತ್ತದೆ' ಎಂದ. ನನಗಾದ ಸಂತೋಷಕ್ಕೆ ನನ್ನ ಪತಿ ರಾಯರಿಗೆ ಕರೆ ಮಾಡಿದೆ. ಅವರು, ' ನಾರಾಯಣ್ ಅವರಿಗೂ ಕರೆ ಮಾಡಿ ಟೆಸ್ಟ್ ಆಯಿತು ಅಂತ ಹೇಳಿಬಿಡು' ಎಂದರು . ನಾನು ಕರೆ ಮಾಡಿ ' ಸಾರ್ .... ನನ್ನ ಟೆಸ್ಟ್ ಮುಗೀತು' ಎಂದೆ. ಅದಕ್ಕವರು ' ನಿನಗೆ ಟೆಸ್ಟ್ ತೆಗೆದುಕೊಂಡದ್ದು ನಾನೇ' ಎಂದರು. ನನ್ನ ಹಿಂದೆ ಕುಳಿತಿದ್ದವರೇ ನಾರಾಯಣ್ ಎಂದು ತಿಳಿದಾಗ ?????......ಇನ್ನು ನೀವೇ ಊಹಿಸಿಕೊಳ್ಳಿ.



Monday, February 16, 2009

ಪ್ರೇಮಿಗಳ ದಿನ




ಪ್ರೀತಿಸಲು ಬೇಕೆ ವರುಷದಲ್ಲೊಂದು ದಿನ
ನಾವೂ ಆಚರಿಸಬೇಕೆ ಪ್ರೇಮಿಗಳ ದಿನ
ಹೃದಯದಲ್ಲಿ ಪ್ರೀತಿ ಮೂಡಿದಾಗ .......
ಮನ ಗರಿಗೆದರಿ ಹರುಷದಿಂದ ಮಧುರ ಗಾನ ಹಾಡಿದಾಗ...
ಬೆಳದಿಂಗಳ ರಾತ್ರಿ ಪ್ರೇಯಸಿ ಸನಿಹದಲ್ಲಿದ್ದಾಗ...
ಮಾಘಿಯ ಚಳಿ ಕಚಗುಳಿ ಇಟ್ಟಾಗ ....
ಮುಂಗಾರು ಮಳೆ ಮೈ ತಣಿಸಿದಾಗ....
ಕೈ ಬಳೆ ಕಾಲ್ ಗೆಜ್ಜೆಯ ನಾದ ಝಂ ಎನಿಸಿದಾಗ....
ಹಸಿರು ಸೀರೆ ಮಲ್ಲಿಗೆ ಮುಡಿದು ಪ್ರಿಯತಮೆ ಎದುರು ನಿಂತಾಗ....
ಪ್ರೇಯಸಿಯ ಹೃದಯದ ಬಡಿತ ಕೇಳುವಷ್ಟು ಮೌನವಿದ್ದಾಗ...
ರಸಿಕತೆ ತಾನಾಗೇ ಉಕ್ಕಿ ಬಂದಾಗ ....
ಎರಡು ಮನಗಳ ಬೆಸುಗೆಯಾದಾಗ .....
ಪ್ರಣಯ ಬಂಧನದಲಿ ಪ್ರೇಮಿಗಳು ಸಿಲುಕಿದಾಗ .....
ಅದೇ... ಅಂದೇ... ಆ ಪ್ರೇಮಿಯ ದಿನ.

ಜೇಬಲ್ಲಿ ದುಡ್ಡು ಇದ್ದಾಗ ಪ್ರೇಯಸಿಗೆ ಕೊಡು ನೀ ಕಾಣಿಕೆ
ಪ್ರೀತಿಸು ತಪ್ಪೇನಿಲ್ಲ , ಪ್ರೀತಿ ಮಾಡಲು ಒಂದೇ ದಿನ ಏತಕೆ ?