ಈ ವರ್ಷದ (೨೦೨೦) ಕೇಂದ್ರೀಯ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪಡೆದ ಕನ್ನಡ ಸಾಹಿತ್ಯದ ಕೃತಿ, "ಕುದಿ ಎಸರು" . ಇದರ ಲೇಖಕಿ ಕನ್ನಡ ಸಾಹಿತ್ಯ ಕ್ಷೇತ್ರದ ಸುಪ್ರಸಿದ್ಧ ವಿಮರ್ಶಕಿ ಹಾಗೂ ಪತ್ರಕರ್ತೆ ಡಾ, ವಿಜಯ. ಇವರು ತಮ್ಮ ಆತ್ಮ ಕತೆಯನ್ನು ಈ ಕೃತಿಯಲ್ಲಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಮಧ್ಯಮ ವರ್ಗದ ಬ್ರಾಹ್ಮಣ ಹೆಣ್ಣು ಮಗಳೊಬ್ಬಳು ಒಬ್ಬ ಸ್ಯಾಡಿಸ್ಟ್ ಗಂಡನ ಕೈಲಿ ಸಿಕ್ಕು ಪಟ್ಟ ಪಾಡುಗಳನ್ನು ವಿವರವಾಗಿ ಹೆಣೆದಿದ್ದಾರೆ. ಪೀಠಿಕೆ ಓದಿದಾಗ.. ಪುಸ್ತಕದುದ್ದಕ್ಕೂ ಅಳಿಸ್ತಾರೆ ಇವರು ಎಂದುಕೊಂಡಿದ್ದೆ, ಆದರೆ ಹಾಗೇನೂ ಇರಲಿಲ್ಲ, ಸಾಧಾರಣ ಘಟನೆಗಳನ್ನೇ ಉತ್ತಮವಾಗಿ ಹೆಣೆದಿದ್ದಾರೆ.
ದೆಹಲಿಯಲ್ಲಿ ನಡೆದ ನಿರ್ಭಯ ಪ್ರಕರಣದಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರ ಕೇಳಿ ಬೆಚ್ಚಿ ಬಿದ್ದಿದ್ದೇವೆ. ಹೀಗೂ ಮಾಡುತ್ತಾರಾ, ಇವರು ನುಷ್ಯರೇನ ಎಂದೆನಿಸುತ್ತಿತ್ತು. ಆದರೆ ಡಾ. ವಿಜಯ ಅವರ ಕತೆಯಲ್ಲಿ, ಗಂಡನಿಂದಲೇ ಆ ರೀತಿಯ ಸಂಕಟಗಳನ್ನನುಭವಿಸಿದ್ದನ್ನು ಕೇಳಿ ಅತ್ಯಂತ ಬೇಸರವಾಯಿತು. ಅದಕ್ಕೆ ದೇವರೇ ಶಿಕ್ಷೆ ಕೊಡಬೇಕು.
ತೆಲುಗು ಮಾತೃಭಾಷೆಯಾದ್ದರಿಂದ, ಹಲವಾರು ಕಡೆ ತೆಲುಗಿನ ವಾಕ್ಯಗಳನ್ನು ಹಾಗೆ ಉಳಿಸಿಕೊಂಡಿದ್ದಾರೆ. ತೆಲುಗಿನ ಗಂಧ ಗಾಳಿ ತಿಳಿಯದವರಿಗೆ ಸ್ವಲ್ಪ ಕಷ್ಟವಾದೀತು.
ಹಲವಾರು ಪುರುಷ ಲೇಖಕರು ಹೇಗೆ ಹೆಣ್ಣು ಮಕ್ಕಳನ್ನು ತಮ್ಮ ಸ್ವಾರ್ಥಕ್ಕೆ ಬಳಸಿ ಕೊಳ್ಳುತ್ತಾರೆ ಎಂಬುದನ್ನೂ ಸಹಾ ವಿವರಿಸಿದ್ದಾರೆ. ಅದು ಎಲ್ಲ ಕ್ಷೇತ್ರದಲ್ಲೂ ಇರುವುದೇ.
ಸಾಮಾನ್ಯ ಹೆಣ್ಣು ಹತ್ತನೆಯ ತರಗತಿ ಓದಿದ್ದವಳು ಸಂಸಾರದ ಕಷ್ಟಗಳ ನಡುವೆ, ಗಂಡನ ಕಿರುಕಳದ ನಡುವೆ ಒಳ್ಳೆಯ ಪತ್ರಕರ್ತೆಯಾಗಿ, ಕನ್ನಡಲ್ಲಿ ಪಿ ಎಚ್ ಡಿ ಮಾಡಿ ಅತ್ಯುನ್ನತ ಸಾಹಿತ್ಯ ಕ್ಷೇತ್ರದ ಪ್ರಶಸ್ತಿಯನ್ನು ಪಡೆದ ಡಾ ವಿಜಯ ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ.
ನನಗೆ ಅನಿಸಿದ ಇನ್ನೊಂದು ವಿಷಯ, ನಮ್ಮಲ್ಲಿ ಎಷ್ಟೋ ಮಂದಿ ಹೆಂಗಸರು ಒಳ್ಳೆಯ ಗಂಡನನ್ನು ಪಡೆದು ಉತ್ತಮ ದಾಂಪತ್ಯ ಜೀವನವನ್ನು ನಡೆಸುತ್ತಿದ್ದೇವೆ. ಆದರೂ ಸಣ್ಣ ಸಣ್ಣ ವಿಷಯಗಳಿಗೆ ಅತೃಪ್ತಿ, ಅಶಾಂತಿ. ಕ್ಷುಲ್ಲಕ ವಿಷಯಗಳಿಗೆ ಮನೆಯಲ್ಲಿ ಗಲಾಟೆ, ಗಲಭೆ, ಖಿನ್ನತೆ. ಇಂತಹವರ ಕತೆ ಓದಿದಾಗ ನಾವು ಭಾಗ್ಯವಂತರು ಎಂಬುದನ್ನು ಅರಿತು ನೆಮ್ಮದಿಯಲ್ಲಿ ಬಾಳಬೇಕು.
ಡಾ. ವಿಜಯ ಅವರು ತಮ್ಮ ವೈಯುಕ್ತಿಕ ಜೀವನವನ್ನು ಈ ಕೃತಿಯಲ್ಲಿ ವಿವರಿಸಿ, ವೃತ್ತಿ ಜೀವನವನ್ನು ಮುಂದಿನ ಸಂಚಿಕೆಯಲ್ಲಿ ಬರೆಯುವುದಾಗಿ ಭರವಸೆ ಕೊಟ್ಟಿದ್ದಾರೆ. ಅವರು ಇಷ್ಟೆಲ್ಲಾ ಕಷ್ಟಗಳ ನಡುವೆ ಅತ್ಯನ್ನತ ಪದವಿಯನ್ನೇರಿದ ವಿವರಗಳನ್ನು ಓದುವ ಕಾತರ ನಮಗಿದೆ. ಅದರ ನಿರೀಕ್ಷೆಯಲ್ಲಿ... ಕವಿತಾ ವಿ ರಾವ್
ಡಾ. ವಿಜಯ ಅವರು ತಮ್ಮ ವೈಯುಕ್ತಿಕ ಜೀವನವನ್ನು ಈ ಕೃತಿಯಲ್ಲಿ ವಿವರಿಸಿ, ವೃತ್ತಿ ಜೀವನವನ್ನು ಮುಂದಿನ ಸಂಚಿಕೆಯಲ್ಲಿ ಬರೆಯುವುದಾಗಿ ಭರವಸೆ ಕೊಟ್ಟಿದ್ದಾರೆ. ಅವರು ಇಷ್ಟೆಲ್ಲಾ ಕಷ್ಟಗಳ ನಡುವೆ ಅತ್ಯನ್ನತ ಪದವಿಯನ್ನೇರಿದ ವಿವರಗಳನ್ನು ಓದುವ ಕಾತರ ನಮಗಿದೆ. ಅದರ ನಿರೀಕ್ಷೆಯಲ್ಲಿ... ಕವಿತಾ ವಿ ರಾವ್