ಮನೆಯಿಂದಲೇ ಕೆಲಸಮಾಡುವ ನಿಯಮ ಬಂದಾಗಿನಿಂದ ನನ್ನ ಕೋಣೆಯನ್ನು ಸಿದ್ದ ಗೊಳಿಸಿ ಲ್ಯಾಪ್ ಟಾಪ್, ಬರೆಯಲು ಪುಸ್ತಕ ಎಲ್ಲವನ್ನೂ ಚೊಕ್ಕಟವಾಗಿ ಜೋಡಿಸಿಕೊಂಡೆ. ಬೆಳಗ್ಗೆ ಹೆಂಡತಿ ಮಾಡಿಕೊಟ್ಟ ತಿಂಡಿ ತಿಂದು ನನ್ನ ಕೋಣೆಗೆ ಹೋಗಿ ಕೂತರೆ ಊಟದ ಸಮಯಕ್ಕೆ ಬರುವುದು, ಅದಾದ ನಂತರ ಮತ್ತೆ ಕೆಲಸ, ಸಂಜೆ ಎಲ್ಲರೂ ಭಜನೆ ಮಾಡುವ ವೇಳೆಗೆ ಬಂದು ಬಿಡುವುದು. ಇದೇ ನನ್ನ ದಿನಚರಿಯಾಗಿದೆ . ೧೫ ವರ್ಷಗಳ ಹಿಂದೆ ನಾನು ಸಸ್ಯ ಶಾಸ್ತ್ರದಲ್ಲಿ ಪಿ ಎಚ್ ಡಿ ಮಾಡುವಾಗ, ಪ್ರಬಂಧವನ್ನು ಟೈಪ್ ಮಾಡುವಾಗ ಹೀಗೆ ನನ್ನ ಕೋಣೆಯಲ್ಲಿ ಹಗಲು ರಾತ್ರಿ ಕಳೆಯುತ್ತಿದ್ದೆ. ಈಗ ನನ್ನ ಶಿಷ್ಯರ ಪ್ರಬಂಧವನ್ನು ತಿದ್ದುವ ಕೆಲಸದಲ್ಲಿ ಮಗ್ನನಾಗಿದ್ದೇನೆ. ಶಾಲೆಯ ದಿನಗಳಿಂದಲೂ ಓದು ವುದರಲ್ಲೇ ನಿರತನಾಗಿದ್ದ ನನಗೆ ಬೇರೆ ಅಭಿರುಚಿಗಳಿಲ್ಲ. ಲಾಕ್ ಡೌನ್ ಆದಾಗಲಿಂದ ಹೆಂಡತಿ ಮಕ್ಕಳ ಜೊತೆ ಸಿನಿಮಾ ನೋಡೋದು, ಕಾರ್ಡ್ಸ್ ಆಡುವುದು ಇತ್ಯಾದಿ ಕಲಿಯುತ್ತಿದೇನೆ. ಟಿ ವಿ ಯಲ್ಲಿ ಮೋದಿಜಿ ಯವರ ಭಾಷಣ ಕೇಳಿದೆ. ಈ ಸಮಯದಲ್ಲಿ ಯಾರು ಯಾರು ಹೇಗೆ ಸಮಯ ಕಳೆಯುತ್ತಿದ್ದಾರೆ ಎನ್ನುವುದರ ಬಗ್ಗೆ ಹೇಳಿದರು. ಕೆಲವರು ತಮ್ಮ ಹಳೆ ವೀಣೆ , ಗಿಟಾರ್ , ತಬಲಾ ತೆಗೆದು ಅಭ್ಯಾಸ ಮಾಡುತ್ತಿದ್ದಾರೆ, ಕೆಲವರು ತಮ್ಮ ಶಾಲೆಯ, ಕಾಲೇಜಿನ ಹಳೆ ಸ್ನೇಹಿತರನ್ನು ವಾಟ್ಸಾಪ್ ಗುಂಪುಗಳಲ್ಲಿ ಭೇಟಿ ಮಾಡಿ ಹಳೆಯ ನೆನಪುಗಳನ್ನು ಮೆಲಕು ಹಾಕುತ್ತಿದ್ದಾರೆ... ಹೀಗೆಲ್ಲ ಮುಂದುವರೆದಿತ್ತು ಅವರ ಭಾಷಣ. ನನಗೂ ನನ್ನ ಸ್ನೇಹಿತರನ್ನು ನೋಡುವ ಹಂಬಲ ಹೆಚ್ಚಾಯಿತು. ಮರುದಿನ ಮಕ್ಕಳ ಜೊತೆ ಕನ್ನಡ ಸಿನಿಮಾ (ಇತ್ತೀಚಿಗೆ ಬಂದದ್ದು ) ಮಾಲ್ಗುಡಿ ಡೇಸ್ ನೋಡಿದೆ. ನನ್ನ ಹಂಬಲ ಇನ್ನೂ ಬಲವಾಯಿತು. ಅಲ್ಲಿ ಇಲ್ಲಿ ಹುಡುಕಿ ನನ್ನ ಶಾಲೆಯ ಸ್ನೇಹಿತನೊಬ್ಬನಿಗೆ ಕರೆ ಮಾಡಿ ಗುಂಪಿನಲ್ಲಿ ನನ್ನನ್ನು ಸೇರಿಸು ಎಂದೇ. ನಂತರ ಎಲ್ಲರ ಪರಿಚಯ, ನೆನಪುಗಳು... ಕೆಲವರನ್ನು ಗುರುತಿಸಿದೆ. ಕೆಲವರು ಊಹಿಸಿದ್ದಕ್ಕಿಂತ ದಪ್ಪವಾಗಿದ್ದದ್ದರಿಂದ ಗುರ್ತಿಸಲು ಸಾಧ್ಯವಾಗಲಿಲ್ಲ. ನಾನು ಶಾಲೆಯ ದಿನಗಳಲ್ಲೂ ಯಾರೊಡನೆಯೂ ಹೆಚ್ಚು ಬೆರೆಯುತ್ತಿರಲಿಲ್ಲ. ಮಿತ ಭಾಷಿಯಾಗಿದ್ದೆ, ಎಲ್ಲರೂ ತಂಟೆ ತರಲೆಗಳು ಮಾಡುತ್ತಿದ್ದರೆ ನಾನು ನೋಡಿಯೂ ನೋಡದಂತೆ ಇರುತ್ತಿದ್ದೆ. ಆ ಗುಂಪಿನಲ್ಲಿ ಪರಿಚಯವಾದ ಕೆಲವರು ನನಗೆ ಪ್ರತ್ಯೇಕವಾಗಿ ಸಂದೇಶಗಳನ್ನು ಕಳಿಸುತ್ತಿದ್ದರು. ನಾನು ಕೆಲವರಲ್ಲಿ ಮಾತನಾಡುತ್ತಿದ್ದೆ. ಕೆಲವರನ್ನು ನಿರ್ಲಕ್ಷಿಸುತ್ತಿದ್ದೆ .
ಒಂದು ದಿನ ಒಬ್ಬ ಸ್ನೇಹಿತನ ಸಂದೇಶ ಬಂತು, ಆತನ ಹೆಸರು ಕರುಣಾಕರ್. ನನಗೆ ನೆನಪಿರುವ ಹಾಗೆ, ಆತ ಓದಿನಲ್ಲಿ ಅಷ್ಟಕ್ಕಷ್ಟೇ ಇದ್ದ. ನಮ್ಮ ಶಾಲೆಯಲ್ಲಿ ಏಳನೆಯ ತರಗತಿಯ ವರೆಗೆ, ಕನ್ನಡ, ತಮಿಳು, ಇಂಗ್ಲಿಷ್ ಮಾಧ್ಯಮ ಇತ್ತು. ನಾನು ಮೊದಲಿನಿಂದ ಇಂಗ್ಲಿಷ್ ಮಾಧ್ಯಮದಲ್ಲಿ ಓದಿದ್ದು. ಎಂಟನೇತರಗತಿಗೆ ಕನ್ನಡ ಮತ್ತು ತಮಿಳು ಮಾಧ್ಯಮದಿಂದ ವಿದ್ಯಾರ್ಥಿಗಳು ಇಂಗ್ಲಿಷ್ ಮಾಧ್ಯಮಕ್ಕೆ ವರ್ಗವಾಗುತ್ತಿದ್ದರು. ಅವರಿಗೆ ಸ್ವಲ್ಪ ಕಷ್ಟ ಆಗುತ್ತಿತ್ತು. ಈ ಕರುಣಾಕರ್ ಸಹ, ಹಾಗೆಯೇ ಕನ್ನಡ ಮಾಧ್ಯಮದಿಂದ ಬಂದವನು. ಅವನಿಗೆ ತಂದೆ ತೀರಿಕೊಂಡು ತಾಯಿ ಉಪ್ಪಿನಕಾಯಿ ಮಾರಿ ಓದಿ ಸುತ್ತಿದ್ದರು. ಒಬ್ಬ ತಮ್ಮನೋ ತಂಗಿಯೋ ಇದ್ದ ಹಾಗೆ ನೆನಪು. ಎಂಟನೆಯ ತರಗತಿಯಲ್ಲಿ ಗಣಿತದಲ್ಲಿ ಸೊನ್ನೆ ಅಂಕಗಳು ಬಂದಿದ್ದವು. ನೋಟ್ ಪುಸ್ತಕದಲ್ಲಿ ಸರಿಯಾಗಿ ಬರೆದುಕೊಳ್ಳುತ್ತಿಲ್ಲ ಅಂತ ವಿಜ್ಞಾನದ ಟೀಚರ್ ಅವನನ್ನು ಬೈದದ್ದು ನನಗೆ ನೆನಪು. ಓದುವ ಮಕ್ಕಳು ಎಲ್ಲಿದ್ದರೂ ಓದುತ್ತಾರೆ, ನೀನು ಸರಿಯಾಗಿ ಅಭ್ಯಾಸ ಮಾಡುತ್ತಿಲ್ಲ ಅಷ್ಟೇ ಎಂದು ಹೇಳಿದ್ದರು. ಆತನ ಸಂದೇಶಗಳಿಗೆ ಆಗೊಮ್ಮೆ ಈಗೊಮ್ಮೆ ಉತ್ತರ ಕೊಡುತ್ತಿದ್ದೆ. ನನ್ನ ಕೆಲಸದ ಬಗ್ಗೆ, ಪಿಎಚ್ ಡಿ ವಿಷಯದ ಬಗ್ಗೆ ಎಲ್ಲಾ ವಿಚಾರಿಸಿದ, ವಿವಿಧ ಹಣ್ಣುಗಳಲ್ಲಿ ಇರುವ ಆಸ್ಕೊರ್ಬಿಕ್ ಆಮ್ಲದ ಬಗ್ಗೆ ನನ್ನ ಸಂಶೋಧನೆ ಎಂದೆಲ್ಲ ವಿವರಿಸಿದೆ. ಆತನ ಕೆಲಸದ ಬಗ್ಗೆ ನಾನು ಎಂದೂ ಕೇಳಲಿಲ್ಲ ... ಏನೋ ಯಾವುದೊ ಸಣ್ಣ ಕಂಪನಿಯಲ್ಲಿ ಸಣ್ಣ ಉದ್ಯೋಗ ಮಾಡ್ತಾ ಇರಬಹುದು ಎನ್ನುವುದು ನನ್ನ ಭಾವನೆ ಯಾಗಿತ್ತು. ಅವನ ಬಗ್ಗೆ ಮೊದಲಿಂದ ಇದ್ದ ಕೀಳರಿಮೆ ಹಾಗೆಯೇ ಇತ್ತು.
ಕೊನೆಗೆ ಒಂದು ದಿನ ನೀನು ಏನು ಮಾಡುತ್ತಿದ್ದೀಯ ಎಂದು ಕೇಳಿದೆ. ನಾನು ಇಸ್ರೋ ದಲ್ಲಿ ಇದ್ದೇನೆ ಎಂದ ... ಯಾವುದಾದರೂ ಗುಮಾಸ್ತಾ ಕೆಲಸ ಇರಬಹುದು ಎಂದು ಕೊಂಡೆ. ಯಾವ ವಿಭಾಗದಲ್ಲಿ ಕೆಲಸಮಾಡುತ್ತಿದ್ದೀಯ ಎಂದು ಕೇಳಿದೆ, ನನಗೆ ಪರಿಚಿತರೊಬ್ಬರು ಇಸ್ರೋ ದಲ್ಲಿ ಇರುವ ಕಾರಣ. ನಾನು ನೋದನ ಶಾಸ್ತ್ರ (propulsion division ) ಎಂದ. ಏನು ಓದಿದ್ದೀ ಎಂದು ಕೇಳಿದೆ, " ನಾನು ಐ ಐ ಟಿ , ಮದ್ರಾಸಿನಿಂದ ಪಿ ಎಚ್ ಡಿ ಮಾಡಿದೆ ೧೯೯೯ ರಲ್ಲಿ. ಆಗ ನನಗೆ ತುಂಬಾ ಗಿಲ್ಟಿ ಆಯಿತು. ತಾಂತ್ರಿಕ ವಿಷಯದಲ್ಲಿ ಡಿಪ್ಲೋಮ ಮಾಡಿ ಕೆಲಸಕ್ಕೆ ಸೇರಿ, ಓದು ಮುಂದುವರೆಸಿ , ಸಂಜೆಯ ಕಾಲೇಜಿನಲ್ಲಿ ಇಂಜಿನೀರಿಂಗ್ ಮಾಡಿ ಎಂ. ಟೆಕ್ ಮಾಡಿ ಪಿ ಎಚ್ ಡಿ ಮಾಡಿ, ದೇಶದ ಉನ್ನತ ಬಾಹ್ಯಾಕಾಶ ಸಂಸ್ಥೆಯಲ್ಲಿ ಉನ್ನತ ಮಟ್ಟದ ಸಂಶೋಧನೆ ಮಾಡುತ್ತಿದ್ದ.
ನನ್ನ ಬಗ್ಗೆ ನನಗೆ ಜಿಗುಪ್ಸೆ ಹುಟ್ಟಿತು. ಶಾಲೆಯಲ್ಲಿ ವಿಜ್ಞಾನದ ಟೀಚರ್ ಹೇಳಿದನ್ನು ನಿರೂಪಿಸಿದ್ದ. ಓದುವ ಮಕ್ಕಳು ಎಲ್ಲಿದ್ದರೂ ಓದುತ್ತಾರೆ. ಮುಂದೆ ಬರಬೇಕೆಂಬ ಛಲ ಇರಬೇಕು, ಸಾಧನೆ ಮಾಡಬೇಕು. ನಾನು ಏನಾದರೂ ಸಾಧಿಸಿಯೇ ತೀರುತ್ತೇನೆ ಎಂಬ ದೃಢ ನಂಬಿಕೆ ಇರಬೇಕು. ನನ್ನ ಸಣ್ಣ ಮಗ ಚೆನ್ನಾಗಿ ಅಂಕಗಳನ್ನು ಪಡೆಯುತ್ತಿಲ್ಲ ಎಂದು ಬೈಯುತ್ತಿದ್ದೆ. ಈಗ ಅದನ್ನು ಬಿಟ್ಟಿದ್ದೇನೆ. ಶಾಲೆಯಲ್ಲಿ ಕಡಿಮೆ ಅಂಕಗಳು ಪಡೆದ ಮಾತ್ರಕ್ಕೆ ಯಾರೂ ಅಪ್ರಯೋಜಕರಾಗುವುದಿಲ್ಲ. ಈ ಘಟನೆಯ ನಂತರ ಎಲ್ಲರನ್ನೂ ಗೌರವಿಸಲು ಪ್ರಾರಂಭಿಸಿದೆ. ನನ್ನ ಕೆಲವು ಸ್ನೇಹಿತರು ಉನ್ನತ ವ್ಯಾಸಂಗ ಮಾಡದಿದ್ದರೂ ತಮ್ಮ ತಮ್ಮ ಕ್ಷೇತ್ರದಲ್ಲಿ ಸಾಧನೆಗಳನ್ನು ಮಾಡುತ್ತಿದ್ದಾರೆ. ಯಾರಬಗ್ಗೆಯೂ ಕೀಳರಿಮೆ ಇಲ್ಲದೆ ವ್ಯವಹರಿಸುತ್ತಿದ್ದೇನೆ. ಇದೆ ನನಗೆ ಕೊರೋನಾ ಲಾಕ್ ಡೌನ್ ಕಲಿ ಸಿದ ಪಾಠ !
No comments:
Post a Comment