Saturday, December 28, 2019

ಇದಂ ನ ಮಮ

ರಾಜೇಶ್ ಅಂದು ತಾನು ಹೊಸದಾಗಿ ಕೊಂಡಿದ್ದ  ಐ- ಫೋನನ್ನು ಎಲ್ಲರಿಗೂ ತೋರಿಸುತ್ತ ಇದ್ದ, ಅದರಲ್ಲಿದ್ದ ಹೊಸ ವೈಶಿಷ್ಟ್ಯತೆ ಗಳ ಬಗ್ಗೆ ವರ್ಣಿಸುತ್ತಿದ್ದ. ನಾನು ಕಾತುರನಾಗಿ ಎಲ್ಲವನ್ನು ನೋಡಿದೆ, ನನಗೆ ಬಂದ ಅನುಮಾನಗಳನ್ನು ಬಗೆಹರಿಸಿಕೊಂಡೆ. ಅದರ ದರ ಎಷ್ಟು ಎಂದು ಕೇಳಿದ್ದಕ್ಕೆ ೯೫, ೦೦೦ ಅಂತ ಹೇಳಿದ. ಅದನ್ನು ಕೇಳಿ ನಾನು ಸುಸ್ತಾದೆ. ಈ ಪ್ರದರ್ಶನ, ಪ್ರಶ್ನೋತ್ತರ ಕಾರ್ಯಕ್ರಮಗಳು ಮುಗಿದಮೇಲೆ ಎಲ್ಲರೂ ನಮ್ಮ ನಮ್ಮ ಕೆಲಸದಲ್ಲಿ ನಿರತರಾದೆವು. ಊಟದ ಸಮಯದಲ್ಲಿ , ಸುನಿಲ್ ಜೊತೆ ಮಾತನಾಡುವಾಗ ನಾನು ಸ್ವಲ್ಪ ಹೆಚ್ಚಾಗೇ ಬೆಳಗ್ಗೆ ರಾಜೇಶ್ ತನ್ನ ಫೋನ್ ಬಗ್ಗೆ ಬಡಾಯಿ ಕೊಚ್ಚಿಕೊಂಡದ್ದನ್ನು ಹೇಳಿದೆ. ಆ ದಿನದ ವರೆಗೆ ನನಗೆ ಐ ಫೋನ್ ಹೇಗಿರುತ್ತದೆ ಎಂದು ಗೊತ್ತಿರಲಿಲ್ಲ. ಅಷ್ಟರಲ್ಲಿ ಸುನೀಲ್ ನ ಫೋನ್ ರಿಂಗ್ ಆಯಿತು, ಆತ ತನ್ನ ಜೇಬಿನಿಂದ ಫೋನ್ ತೆಗೆದು ಮಾತನಾಡಿ ಪುನಃ ಜೇಬಿನಲ್ಲಿರಿಸಿದ. ಆಗ ಗಮನಿಸಿದೆ, ಅದು ಐ ಫೋನ್. " ಏ ಸುನಿಲ್ ನಿನ್ನ ಹತ್ರ ಐ ಫೋನ್ ಇರೋ ವಿಷಯ ಹೇಳಲೇ ಇಲ್ಲ" ಅಂದೇ. ಅದಕ್ಕವನು , "ಅದರಲ್ಲೇನಿದೆ, ಇದು ನನ್ನ ಅಣ್ಣ ಉಡುಗೊರೆಯಾಗಿ ಕೊಟ್ಟದ್ದು... ಈದಿನ ಇರುತ್ತೆ... ನಾಳೆ ಹೊಸ ಮಾಡೆಲ್ ಬಂದ ಮೇಲೆ ಇದು ಹೋಗತ್ತೆ... ಇದೆಲ್ಲ ಅಷ್ಟು ಮುಖ್ಯ ಅಲ್ಲ, ಬರುತ್ತೆ ಹೋಗುತ್ತೆ, ಅದಕ್ಕೆ ನಾನು ಅಷ್ಟೊಂದು ಪ್ರಾಮುಖ್ಯತೆ ಕೊಡಲಿಲ್ಲ" ಎಂದ. ಆತ ಎಷ್ಟು ಸರಳವಾಗಿ ಇದ್ದ ಅಂದ್ರೆ, ನಾನು ತುಂಬ ಸಲ ಗಮನಿಸಿದ್ದೇನೆ, ಬಾಸ್ ಏನಾದ್ರೂ ಬೈದ್ರೆ, ನಾವೆಲ್ಲಾ ಆ ಬಾಸ್ ಗೆ ಶಾಪ ಹಾಕಿ ಎರಡು ಮೂರು ದಿನ ಆ ಘಟನೆಯನ್ನೇ ಮತ್ತೆ ಮತ್ತೆ ಆಲೋಚನೆ ಮಾಡ್ತೀವಿ . ಆದ್ರೆ ಈ ಪುಣ್ಯಾತ್ಮ ಬಾಸ್ ಹೊಗಳಿದ್ರೂ ಒಂದೇ ಥರ ಇರ್ತಾನೆ ತೆಗಳಿದ್ರೂ ಒಂದೇ ಥರ ಇರ್ತಾನೆ, ನನಗೆ ನೆನಪು ಆಗೋದು ಧೋನಿ ವರ್ಲ್ಡ್ ಕಪ್ ವಿನ್ ಆದಾಗ ಎಷ್ಟು ಶಾಂತವಾಗಿದ್ದ ಅದೇ ಗಾಂಗೂಲಿ ೨೦೦೨ ರ ಇಂಗ್ಲಾಂಡ್ ಮೇಲೆ ಸರಣಿ ಪಂದ್ಯ ಗೆದ್ದಾಗ ಅಂಗಿಯನ್ನು ಬಿಚ್ಚಿ ಕುಣಿದಾಡಿದ. ಸುಖ ಬಂದಾಗ ಹಿಗ್ಗದೇ ದುಃಖ ಬಂದಾಗ ಕುಗ್ಗದೆ ಇರುವವನೇ ನಿಜವಾದ ಮಾನವ.
ಇಂದು ಅಪ್ಪ ಅಮ್ಮ ಸ್ವಲ್ಪ ಬೈದ್ರೆ, ಮಕ್ಕಳು ಬೇಜಾರು ಮಾಡಿಕೊಳ್ತಾರೆ. ಟೀಚರ್ ಬೈದ್ರೆ , ಪರೀಕ್ಷೆಯಲ್ಲಿ ಅಂಕಗಳು ಕಡಿಮೆ ಬಂದ್ರೆ ಖಿನ್ನತೆಗೆ ಒಳಗಾಗ್ತಾರೆ. ಕೆಲಸ ಹೋಯಿತು ಎಂದ್ರೆ ಮೂರನೇ ಮಹಡಿಯಿಂದ ಬಿದ್ದು ಪ್ರಾಣ ಕಳೆದು ಕೊಳ್ಳುತ್ತಾರೆ. ಪ್ರೀತಿಸಿದ ಹುಡುಗಿ ಬೇರೆಯವನ ಜೊತೆ ಹೋದ್ಲು.. ಖಿನ್ನತೆ.
ಇದನ್ನೇ ಗೀತೆ ೫. ೨೦ ನಲ್ಲಿ ಹೇಳೋದು. ಅತ್ಯಂತ ಪ್ರಿಯವಾದದ್ದು ಸಿಕ್ಕಾಗ ಹರ್ಷಿಸುವುದು, ಅದನ್ನು ಕಳೆದುಕೊಂಡಾಗ ದುಃಖಿಸುವುದು ಇವೆರಡನ್ನೂ ಯಾರು ಮಾಡುವುದಿಲ್ಲವೋ ಅವನು ಆಧ್ಯಾತ್ಮಿಕ ನೆಲೆಯನ್ನು ಹೊಂದುತ್ತಾನೆ. ಇಂದು ನಮಗೆ ಹಾಗೂ ನಮ್ಮ ಮಕ್ಕಳಿಗೆ ಇದರ ಅವಶ್ಯಕತೆ ಬಹಳ ಇದೆ. ಒಮ್ಮೆ ಆಲೋಚಿಸಿ ೯೫ ೦೦೦ ಕೊಟ್ಟು ತಂದ ಫೋನ್ ಎರಡನೇ ದಿನಕ್ಕೆ ಕಳುವಾದಾಗ ಅವನಿಗೆ ಎಷ್ಟು ನೋವಾಗುತ್ತದೆ. ಯಾವಾಗ್ಲೂ " ಇದಂ ನ ಮಮ - ಇದು ನನ್ನದಲ್ಲ " ಎಂದು ಇರಬೇಕು. ಕಮಲದ ಎಲೆಯಮೇಲೆರುವ ನೀರಿನಂತೆ ನಾವು ಈ ಜೀವನದಲ್ಲಿ ಇರಬೇಕು.
ಹರೇ ಕೃಷ್ಣ
ಕವಿತಾ ವಿ ರಾವ್



ಪಾಪ ಪುಣ್ಯ

 
ಆ ದಿನ  ನಾನು ಒಂದು ಕಾರ್ಯಕ್ರಮಕ್ಕೆ ಹೋಗಿದ್ದೆ, ಮನೆಗೆ ಹೋಗಲು ತಡವಾಯಿತು. ನನ್ನ ಎರಡನೇ ಮಗಳು ಕರೆ ಮಾಡಿ  " ಅಮ್ಮ ಮನೆ ಮುಂದೆ ಒಂದು ನಾಯಿ ಬಿದ್ದಿದೆ, ಅದರ ಮೈಯಿಂದ ರಕ್ತ ಸುರಿತಾ ಇದೆ .. ಏನು ಮಾಡೋದು ಗೊತ್ತಾಗ್ತಾ ಇಲ್ಲ " ಎಂದು ಹೇಳಿದಳು . ಆಗ ನಾನು ಫೋನಿನಲ್ಲಿ ಏನೂ ಹೇಳಲು ಆಗಲಿಲ್ಲ. ಆ ನಾಯಿ ಅಪಘಾತದಲ್ಲಿ ಗಾಯಗೊಂಡು ಎಲ್ಲಿಂದಲೋ  ಬಂದು  ಮನೆಯ  ಬಳಿ ಬಿದ್ದು ನರಳುತ್ತಿತ್ತು. ನನ್ನ ಮಗಳು  ನಮ್ಮ ಮನೆಯ ಸಮೀಪದಲ್ಲಿದ್ದ ಓರ್ವ ಸಮಾಜ ಸೇವಕಿಯನ್ನು ಸಂಪರ್ಕಿಸಿ , ಆಕೆಯ ಸಲಹೆಯ ಮೇಲೆ ಆ ನಾಯಿಗಾದ ಗಾಯದ ಮೇಲೆ  ಹರಿಶಿನ ಹಾಕಿ ನೀರು ಕೊಟ್ಟು ಸ್ವಲ್ಪ ಹೊತ್ತು ಶುಶ್ರುಷೆ ಮಾಡಿದಳು. ನಂತರ, ಸೇವಾಶ್ರಮದವರು ಬಂದು ಆ ನಾಯಿಯನ್ನು ಅವರ ಆಸ್ಪತ್ರೆಗೆ ಕೊಂಡೊಯ್ದರು. ನಾನು ಮನೆಗೆ ಹೋಗುವ ವೇಳೆಗೆ ಈ ಎಲ್ಲ ಕೆಲಸಗಳು ಮುಗಿದಿದ್ದವು. ಕೆಲವು ದಿನಗಳ ನಂತರ ಆ ನಾಯಿ ಪ್ರಾಣ ತ್ಯಜಿಸಿತು. 
ಒಂದು ಪುಣ್ಯದ ಕೆಲಸ ಎಂದರೆ, ದೇವರನ್ನು ಪೂಜಿಸೋದು ಮಾತ್ರ ಅಲ್ಲ , ಆ ದೇವರ  ಸೃಷ್ಟಿಯಾದ ಎಲ್ಲದರಲ್ಲೂ ದೇವರನ್ನು ಕಾಣಬೇಕು . ಗಿಡಕ್ಕೆ ನೀರು ಹಾಕೋದರಿಂದ ಹಿಡಿದು, ನಾಯಿಗೆ ಬಿಸ್ಕತ್ತು ಹಾಕುವವರೆಗೂ ಪುಣ್ಯಗಳೇ,. ಇಲ್ಲಿ ಒಂದು ಪ್ರಶ್ನೆ , ಪುಣ್ಯದ  ಕೆಲಸ ಮಾಡೋದರಿಂದ ನಾವು ಪಾಪಗಳನ್ನು ಕಳೆದುಕೊಳ್ಳ ಬಹುದಾ ? ಸಾಧ್ಯವಿಲ್ಲ. ಪುಣ್ಯದ ಕೆಲಸ ಹೆಚ್ಚು ಹೆಚ್ಚು ಮಾಡುವುದರಿಂದ ಪಾಪ ಮಾಡುವ ಪ್ರಜ್ಞೆ ಕಡಿಮೆಯಾಗುತ್ತದೆ ಹೊರತು ಪಾಪವಲ್ಲ. ನಮ್ಮಲ್ಲಿ  ಕೆಟ್ಟ ಆಲೋಚನೆಗಳು, ಕೇಡು ಮಾಡುವ ಉದ್ದೇಶಗಳು ಕಡಿಮೆಯಾಗುತ್ತವೆ. ಇದನ್ನೇ ಗೀತೆಯ ೭ ನೇ ಅಧ್ಯಾಯ  ೨೮ ನೇ ಶ್ಲೋಕದಲ್ಲಿ ಹೇಳಿರುವುದು. 
ಯಾರು ಪಾಪ ಮತ್ತು ಪುಣ್ಯ ಎರಡರಿಂದ ಮುಕ್ತನಾಗುತ್ತಾನೋ ಆತ  ಯಾವ ದ್ವಂದ್ವಗಳಲ್ಲಿಯೂ ಸಿಲುಕದೆ ಭಗವಂತನ ಸೇವೆಯಲ್ಲಿ ನಿರತನಾಗುತ್ತಾನೆ. 
ಹರೇ ಕೃಷ್ಣ 
ಕವಿತಾ ವಿ. ರಾವ್ 

Friday, December 27, 2019

ಅವನೇ ಶ್ರೀಮನ್ನಾರಾಯಣ

ಬಹಳ ದಿನದ ನಿರೀಕ್ಷೆಯಂತೆ "ಅವನೇ ಶ್ರೀಮನ್ನಾರಾಯಣ" ಬಿಡುಗಡೆ ಯಾಯಿತು.  ಮೊದಲನೆ  ದಿನ ಸಿನಿಮಾ ನೋಡೋದು ಅದೊಂಥರಾ ಮಜಾ. ಹೀರೊ ಎಂಟರ್ ಆಗುವಾಗ ಶಿಳ್ಳೆ ಹೊಡಿಯೋದು ಇನ್ನೊಂದು ಮಜಾ. ರಕ್ಷಿತ್  ಶೆಟ್ಟಿ ಎಂಟ್ರಿ  ವಿಭಿನ್ನವಾಗಿದೆ. ಅಣ್ಣಾವ್ರ " ಭಕ್ತ ಪ್ರಹ್ಲಾದ ಸಿನಿಮಾ... ,  " ಇಲ್ಲಿದ್ದಾನಾ ನಿನ್ನ ಶ್ರೀ ಹರಿ" ಎಂದು ಕಂಬವ ಒಡೆಯುವಾಗ   ರಕ್ಷಿತ್  ಶೆಟ್ಟಿ ಎಂಟ್ರಿ . ಮೊದಲನೇ ಹಾಡಿನ ನೃತ್ಯದ  ಸ್ಟೆಪ್ಸ್  ಈಗಾಗಲೇ ವೈರಲ್ ಆಗಿವೆ. ಹಾಸ್ಯದಿಂದ ಕೂಡಿದ ಕುತೂಹಲಕಾರಿ ದೃಶ್ಯಗಳು. ಕಳೆದು ಹೋದ ನಿಧಿಯನ್ನು ಹುಡುಕುವ ಪ್ರಯತ್ನ. ಮೊದಲರ್ಧದಲ್ಲಿ ಕತೆಯಲ್ಲಿ ಅನೇಕ ತಿರುವುಗಳು. ಪುರಾಣದ ಕತೆ  ನಾಟಕವಾಗಿ ನೋಡೋದು ಈಗ ವಿರಳವಾಗಿರೋದರಿಂದ ಅದು ಒಂದು ಹೊಸ ಅನುಭವ. " ರಾಮ ರಾಮ...... ಜಾರಿಪಾ" ಎಂಬ ನಾಟಕದ ಡೈಲಾಗ್ ನಿಂದ ನಿಧಿಯ ನಕ್ಷೆ ಬೇಧಿಸುವುದು ಅಧ್ಭುತ .
ಮಧ್ಯಂತರದ   ನಂತರ ಕತೆ ಸ್ವಲ್ಪ ನಿಧಾನ ಗತಿ. ಅಚ್ಚ ಕನ್ನಡದ ಡೈಲಾಗ್ ಗಳು, ಮಧ್ಯದಲ್ಲಿ ಯೋಗ್ ರಾಜ್ ಭಟ್ ಬಂದಾಗ, ರಿಷಬ್ ಶೆಟ್ಟಿ ಬಂದಾಗ ಶಿಳ್ಳೆ. ಕಿರಿಕ್ ಪಾರ್ಟಿ ನೋಡಿ ರಕ್ಷಿತ್ ಶೆಟ್ಟಿ ಅಭಿಮಾನಿಗಳಾದ ನಮಗೆ ಅವನ  ದಕ್ಷಿಣ ಕನ್ನಡದ ಸೊಗಡು, ಹುಲಿ ವೇಷ, ಇತ್ಯಾದಿ ಈ ಸಿನೆಮಾ ದಲ್ಲಿ ಸಿಗಲಿಲ್ಲ. ಕಡೇ ಕಡೆಗೆ ಸ್ವಲ್ಪ ಜಾಸ್ತಿ  ಕತೆ ಎಳೆದು ಕೊಂಡು ಹೋಯ್ತು ಅನಿಸುತ್ತೆ. ಅನವಶ್ಶಕವಾದ  ಫಿಟ್  ಸೀನ್ಸ್.  ಕಡೆಗೆ "ಒಳಗಿರುವ ನಾರಾಯಣನನ್ನ ಎಬ್ಬಿಸಿದೆ" ಎನ್ನುವ ಪಂಚ್ ಲೈನ್ ತನ್ನ ಶಕ್ತಿ ಕಳೆದುಕೊಂಡಿದೆ.
ಒಟ್ಟಾರೆ. .. ರಕ್ಷಿತ್ ಶೆಟ್ಟಿ ಅಭಿಮಾನಿಗಳಿಗೆ ಮನೋರಂಜನೆಯ ರಸದೌತಣ , ಹೆಚ್ಚು ನಿರೀಕ್ಷೆ ಮಾಡಿದವರಿಗೆ ಸ್ವಲ್ಪ ನಿರಾಸೆ.
೭.೫/೧೦ ರೇಟಿಂಗ್ ಕೊಡಬಹುದು. 

Wednesday, December 25, 2019

ಅತಿಯಾದರೆ ಅಮೃತವೂ ವಿಷ

ಡಾ. ಎಸ್  ಪ್ರಸಾದ್ ಅವರು ಬರೆದ ಕನ್ನಡ ಸಾಹಿತ್ಯ ಪರಂಪರೆಯನ್ನು ಓದುತ್ತಿದ್ದೆ.  ವಚನ ಸಾಹಿತ್ಯವನ್ನು ಓದುವಾಗ ಮನಸ್ಸು  ಏಕೋ ತುಂಬಾ ಕಸಿ ವಿಸಿ.  ೧೨- ೧೩ ನೆಯ ಶತಮಾನದಲ್ಲೇ ಜನರು ವೈದಿಕ ಪದ್ಧತಿಯ ಬಗ್ಗೆ ರೋಸಿ ಹೋಗಿದ್ದರು. ಆಚಾರ, ಧರ್ಮ, ದೇವರು  ಇತ್ಯಾದಿಗಳ ಹೆಸರಲ್ಲಿ ಆಗುತ್ತಿದ್ದ ಅನಾಚಾರಗಳಿಗೆ  ಮನನೊಂದಿದ್ದರು. ಹೆಣ್ಣಿಗೆ ಸ್ವಾತಂತ್ರ್ಯವಿಲ್ಲ,ದೇವತಾ ಯಾಗಗಳಲ್ಲಿ ಹಿಂಸೆ, ಹೊಲೆಯರನ್ನು ಹೊರಗಿಟ್ಟ ರೀತಿ ...ಇವುಗಳೆಲ್ಲ ಅವರ ಮನಸಿಗೆ ನೋವುಂಟು ಮಾಡಿತ್ತು. ಕುವೆಂಪು ಅವರು ವೈದಿಕ ಪದ್ದತಿಯನ್ನು ಅಲ್ಲಗಳೆಯುವುದ ಕಂಡು  ಪಾಶ್ಚಾತ್ಯದ  ಪ್ರಭಾವ ಎಂದುಕೊಂಡಿದ್ದೆ. ಆದರೆ ೧೨ ನೆಯ ಶತಮಾನದ    ವಚನಕಾರರು ನಿಂದಿಸುವುದ ಕಂಡರೆ ಸಂದೇಹಗಳು ಹೆಚ್ಚಾಗತೊಡಗಿದವು. ಇದಕ್ಕೆ ನಾನು ಕಂಡುಕೊಂಡ ಉತ್ತರ ಇಷ್ಟೇ ... " ಅತಿ ಆದರೆ ಅಮೃತವು ವಿಷ". ಎರಡು ಪುಸ್ತಕ , ನಾಲ್ಕು ವಚನಗಳನ್ನು ಓದಿ ಸಮಾಜವನ್ನು  ವಿಮರ್ಶಿಸುವಷ್ಟು ದೊಡ್ಡವಳಲ್ಲ. ಅತಿ ಸಣ್ಣ ತಲೆಯಲ್ಲಿ ಹೊಳೆದದ್ದು ಇದು... ಬಹುಶಃ ವೈದಿಕ ಪದ್ದತಿಗಳ ದುರುಪಯೋಗವಾಗಿರಬಹುದು. ನಮ್ಮ ಪುರಾತನ ವೈದಿಕ ಪದ್ಧತಿ ಏನಿದೆ... ಅದು ಹಲವು ಋಷಿ ಮುನಿಗಳ ತಪಸ್ಸಿನ ಹಾಗೂ ಅನುಭವದ ಫಲ. ಕಾಲಕ್ರಮೇಣ ಅವು ದುರುಪಯೋಗವಾಗಿ.. ಹೇಳಿದ್ದು ಏನೋ ...ಮಾಡುವುದು ಇನ್ನೇನೋ ಆಗಿರಬೇಕು. ಉದಾಹರಣೆಗೆ ಇಂದಿನ ಒಂದು ವ್ಯವಸ್ಥೆಯನ್ನು ತೆಗೆದುಕೊಳ್ಳಿ, ಒಂದು ಕಚೇರಿಯಲ್ಲಿ,  ಮೇಲಿನ ಅಧಿಕಾರಿ, ಆತನ ಕೆಳಗೆ ಕೆಲಸ ಮಾಡುವ ಅಧಿಕಾರಿಗಳು, ಕಡೆಯಲ್ಲಿ ಪ್ಯೂನ್ . ಮೇಲಧಿಕಾರಿಗೆ ಜವಾಬ್ದಾರಿ ಹೆಚ್ಚು, ಪ್ಯೂನ್  ನ  ಜವಾಬ್ದಾರಿ ಕಡಿಮೆ ( ಇದು ನಮ್ಮ ವರ್ಣ ವ್ಯವಸ್ಥೆಗೆ ಹತ್ತಿರವಾದದ್ದು). ಈ ವ್ಯವಸ್ಥೆ ..  ಆ ಕಚೇರಿಯ ಕಾರ್ಯಗಳು ಸುಗಮವಾಗಿ ನಿರ್ವಹಿಸಲು ಮಾಡಿದಂಥದ್ದು.  ಅದು ಸರಿಯಾಗಿ ನಡೆದರೆ ಎಲ್ಲರಿಗೂ ಆತ್ಮ ತೃಪ್ತಿ , ದುರುಪಯೋಗವಾದರೆ  ಅಲ್ಲೋಲ ಕಲ್ಲೋಲದ ಸೃಷ್ಟಿ. ಪ್ಯೂನ್ ಕೈಯಲ್ಲಿ ಮೇಲಧಿಕಾರಿ ತನ್ನ ವೈಯುಕ್ತಿಕ  ಕಾರ್ಯಗಳನ್ನು ಮಾಡಿಸಿಕೊಂಡರೆ, ಮನೆಗೆ ತರಕಾರಿ ತರಿಸುವುದೋ ಇನ್ನಿತರ ಕೆಲಸಗಳನ್ನು ಮಾಡಿಸಿಕೊಂಡರೆ... ಒಬ್ಬ ಅಧಿಕಾರಿ ಲಂಚ ತೆಗೆದುಕೊಂಡು ಕೆಲಸ ಮಾಡಿದರೆ ... ಆಗ ತಪ್ಪು  ವ್ಯವಸ್ಥೆಯದಲ್ಲ , ಅದನ್ನು ದುರುಪಯೋಗ ಮಾಡಿಕೊಂಡವರದು.
ಹೀಗೆ ಅನೇಕ ಉದಾಹರಣೆ ಗಳನ್ನು ನೋಡಬಹುದು. ವರದಕ್ಷಣೆ ವಿರುದ್ಧ ಕಾಯಿದೇ .. ಅದು ಈಗ ಎಷ್ಟು ದುರುಪಯೋಗವಾಗುತ್ತಿದೆ. ನಿಜವಾಗಿ ನೋವನ್ನು ಅನುಭವಿಸುತ್ತಿರುವ ಹೆಣ್ಣು ಮಕ್ಕಳು ಮೌನವಾಗಿದ್ದಾರೆ. ಈ ಕಾಯಿದೆಯ ಹೆಸರಲ್ಲಿ ಗಂಡನನ್ನು ಹೆದರಿಸುವ, ಅತ್ತೆ ಮಾವಂದಿರನ್ನು ಜೈಲಿಗೆ ತಳ್ಳಿರುವ ಪ್ರಕರಣಗಳು ಎಷ್ಟು ನೋಡುತ್ತಿಲ್ಲ. ಇನ್ನೊಂದು ... ಮೀಸಲಾತಿ ಕಾಯಿದೆ,  ನಿಜವಾಗಿಯೂ  ಮೀಸಲಾತಿಯ ಫಲಾನುಭವಿಗಳಿಗೆ ಇದು ದೊರೆಯುತ್ತಿಲ್ಲ. ಅಪ್ಪ ಕಷ್ಟ ಪಟ್ಟು ಓದಿ ಮೇಲಕ್ಕೆ ಬಂದರೆ, ಮಗ ನನಗೆ ಮೀಸಲಾತಿಯಲ್ಲಿ ಸೀಟು ಸಿಗುತ್ತದೆ ಎಂದು ಪೋಕರಿ ತಿರುಗುವ ಮಕ್ಕಳು ನಮ್ಮ ಕಣ್ಣ ಮುಂದೆಯೇ ಇದ್ದಾರೆ.
ಇವೆಲ್ಲದರಿಂದ ತಿಳಿಯಿವುದು ಒಂದೇ... ವ್ಯವಸ್ಥೆ ತಪ್ಪಲ್ಲ .. ಅದರ ದುರುಪಯೋಗ ತಪ್ಪು.
ನಮ್ಮ ಋಷಿ ಮುನಿಗಳು ಹೆಣ್ಣು ಮಾಯೆ ಹೊನ್ನು ಮಾಯೆ ಎಂದರು. ಸರಿಯಾಗಿಯೇ  ಹೇಳಿದ್ದಾರೆ, ಹೆಣ್ಣಿನ ಹಿಂದೆ ಹೋಗಿ ತನ್ನ ನಿಜವಾದ ಕಾಯಕವನ್ನೇ ಮರೆತರೆ ಅವನು ಮೂರ್ಖ. ಹೊನ್ನು... "ಅಂದು ಆಸೆಯೇ ದುಃಖಕ್ಕೆ ಮೂಲ ಕಾರಣ ಎಂದು ಸಿದ್ಧಾರ್ಥ ಜಗತ್ತಿಗೆ  ಬೋಧಿಸಿದ , ಇಂದು ಅದನ್ನು ವಾಸ್ತವಿಕವಾಗಿ ಸಾಬೀತುಪಡಿಸಿದ ಸಿದ್ಧಾರ್ಥ(ಹೆಗ್ಗಡೆ)". ಸಾಲ ಮಾಡಿ  ತುಪ್ಪ ತಿನ್ನು ಅಂದ ಚಾರ್ವಾಕ, ಸಾಲದ ಬಾಧೆಯಿಂದ  ನೇಣಿಗೆ ಶರಣಾಗುತ್ತಿದ್ದಾನೆ ಇಂದಿನ ಯುವಕ.
ವಚನಕಾರರು ಹೆಣ್ಣು ಮಾಯೆಯಲ್ಲ ಹೊನ್ನು ಮಾಯೆಯಲ್ಲ ಎಂದರು ಅದೂ ಸರಿಯೇ, ಮಿತವಾಗಿದ್ದರೆ ಯಾವುದೂ ಮಾಯೆಯಲ್ಲ.
ನಾನು ಹೇಳುವುದಿಷ್ಟೇ  ಎಲ್ಲವನ್ನೂ ಒಪ್ಪಿಕೊಳ್ಳಬೇಕು, ಅಪ್ಪಿಕೊಳ್ಳಬೇಕು. ನಮ್ಮದೇ ಶ್ರೇಷ್ಠ, ನಾವೇ ದೊಡ್ಡವರು ಎಂಬ ಅಹಂಕಾರವೇನಿದೆ ಅದು ಸರಿಯಲ್ಲ. ಅತಿಯಾಗಿ ಪ್ರೀತಿಸುವುದು, ಅತಿಯಾಗಿ ದ್ವೇಷಿಸುವುದು ಕೂಡ  ಅಪಾಯಕಾರಿ. ದಾಸರು, ವಚನಕಾರರು, ಭಗದ್ಗೀತೆ ಎಲ್ಲ ಹೇಳುವುದು ಒಂದೇ. ಈ ಜೇವನ ಶಾಶ್ವತವಲ್ಲ , ಭಗವಂತನನ್ನು ಒಳಗಣ್ಣಿನಿಂದ ನೋಡು,  ಆತನ ಸೃಷ್ಟಿಯಲ್ಲಿ ನೋಡು.
ಸಂಕುಚಿತ ಮನೋಭಾವವನ್ನು ಬಿಟ್ಟು ಸದಾಚಾರಗಳಿಂದ ಬದುಕೋಣ.
ಹರೇ ಕೃಷ್ಣ .
ಕವಿತಾ ವಿ ರಾವ್


















Sunday, December 22, 2019

ನಮ್ಮ ಬೆಂಗಳೂರು

ಕೆಲವು ದಿನಗಳ  ಹಿಂದೆ ಅನಿರೀಕ್ಷಿತವಾಗಿ ಗೋವಾಗೆ ಹೋಗಬೇಕಾಗಿ  ಬಂತು. ಯಶವಂತಪುರ ರೈಲು ನಿಲ್ದಾಣದಿಂದ ಸುಮಾರು ಮಧ್ಯಾಹ್ನ  ೨. ೦೦ ಗಂಟೆಗೆ  ವಾಸ್ಕೊಡಿಗಾಮ ಎಕ್ಸ್ ಪ್ರೆಸ್  ಹತ್ತಿದೆ. ನನ್ನ  ಏ.ಸಿ  ಕೋಚಿನಲ್ಲಿ   ಜನ ಕಡಿಮೆ ಇದ್ದರು. ನನ್ನ ಎದುರಿನ ಸೀಟಿನಲ್ಲಿ   ಸುಮಾರು ನನ್ನ ವಯಸ್ಸಿನ ಹೆಂಗಸು ಬಂದು ಕುಳಿತರು. ಆಧುನಿಕ ಉಡುಗೆ ತೊಟ್ಟ ಹೆಂಗಸು, ಕೂದಲು  ಬಾಬ್ ಕಟ್, ಜೀನ್ಸ್ ಪ್ಯಾಂಟು - ಟೀ ಶರ್ಟು  ತೊಟ್ಟಿದ್ದಳು. ನಾನೋ  ಮಧ್ಯಮವರ್ಗದವಳು , ಸ್ವಲ್ಪ ಅಂಜುತ್ತಲೇ ಆಕೆಯ ಜೊತೆ ಮಾತನಾಡಲು ಪ್ರಾರಂಭಿಸಿದೆ. ತುಂಬಾ ಸರಳ ವ್ಯಕ್ತಿತ್ವದ  ಕ್ರೈಸ್ತ ಹೆಂಗಸು, ಒಂದೆರಡು ಮಾತಿನಲ್ಲೇ ಸನಿಹವಾದಳು. ಬಸ್ಸು ರೈಲುಗಳಲ್ಲಿ ಪ್ರಯಾಣ ಮಾಡುವಾಗ ಕಿವಿಗೊಂದು ಇಯರ್  ಫೋನು ಅಂಟಿಸಿಕೊಂಡು ತಮ್ಮಷ್ಟಕ್ಕೆ  ತಾವೇ ಇರುವ ಜನರೇ ಹೆಚ್ಚು. ಹೊಸಬರ ಪರಿಚಯ, ಅವರ ಅಭಿರುಚಿಗಳು ತಿಳಿದುಕೊಳ್ಳುವುದು ಈಗ ತುಂಬಾ ವಿರಳವಾಗಿದೆ. ನಾವು ಪ್ರಯಾಣ ಮಾಡುವ ಸ್ವಲ್ಪ ಹೊತ್ತಾದರೂ  ಬೇರೆಯವರ ಜೊತೆ ಮಾತು ಕತೆ... ಇದೆಲ್ಲ ಈಗಿನ ಸಮಾಜ ಮರೆತೇ ಹೋಗಿದೆ.
ಸರಿ .. ಆ ಹೆಂಗಸಿನ ವಿಷಯಕ್ಕೆ ಬರೋಣ. ಆಕೆ ಮುಂಬೈ ನಲ್ಲಿ ಹುಟ್ಟಿ ಬೆಳೆದು ಈಗ ಆಸ್ಟ್ರೇಲಿಯಾದಲ್ಲಿ  ನೆಲೆಸಿದ್ದಾರಂತೆ. ತಮ್ಮ ಆಪ್ತ ಮಿತ್ರ ರೊಬ್ಬರನ್ನು ಭೇಟಿ ಮಾಡಲು ಬೆಂಗಳೂರಿಗೆ ಬಂದಿದ್ದರು ಅಲ್ಲಿಂದ ತನ್ನ ಗೋವಾದಲ್ಲಿರುವ ಒಂದು  ಆಸ್ತಿಯನ್ನು ಮಾರಲು ಹೊರಟಿದ್ದಳು (ಒಬ್ಬಳೇ). ನನಗೆ ಆಕೆಯನ್ನು ನೋಡಿ ತುಂಬ ಹೆಮ್ಮೆಯಾಯಿತು. ಸ್ತ್ರೀಯರು ಎಷ್ಟು ಧೈರ್ಯವಾಗಿ ಮತ್ತು ಸ್ವಾತಂತ್ರವಾಗಿ ತಮ್ಮ ಎಲ್ಲಾ ಕೆಲಸವನ್ನು   ಮಾಡಿಕೊಳ್ಳುತ್ತಿದ್ದಾರೆ. ಆಕೆ ತಾನು ಅರ್ಥ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರೆ (MA in economics) ಎಂದು ಹೇಳಿದಳು.  ನಾನು, " ಈ ಅರ್ಥ ಶಾಸ್ತ್ರ ನನಗೆ ಅರ್ಥ ಆಗೋಲ್ಲ . ಒಮ್ಮೆ ಮೋದಿ ಹೇಳ್ತಾರೆ ಜಿಡಿಪಿ ಹೆಚ್ಚಾಗ್ತಾ ಇದೆ ಅಂತ..ಮತ್ತೊಮ್ಮೆ ಮನಮೋಹನ್ ಸಿಂಗ್ ಹೇಳ್ತಾರೆ, ದೇಶ  ದುಸ್ಥಿತಿಯಲ್ಲಿದೆ ಅಂತ, ಯಾವುದನ್ನು  ನಂಬುವುದು ತಿಳಿಯೋಲ್ಲ" ಎಂದೆ .  ಅದಕ್ಕೆ ಆಕೆ ಭಾರತದ ಆರ್ಥಿಕ ಪರಿಸ್ಥಿತಿ ಸರಿಯಾಗಿಲ್ಲ, ನಮ್ಮ ಮಕ್ಕಳನ್ನು ವಿದೇಶಕ್ಕೆ ಕಳಿಸಬೇಕು, ಇಲ್ಲಿ ಏನೂ ಇಲ್ಲ ಎಂದುಬಿಟ್ಟಳು.  ನನಗೆ ಸ್ವಲ್ಪ ನಿರಾಸೆಯಾಯಿತು. ನನ್ನ ಮಕ್ಕಳನ್ನು ಹೊರದೇಶಕ್ಕೆ ಕಳುಹಿಸುವ ಉದ್ದೇಶ ಏನೂ ಇಲ್ಲ.  ಆಕೆಯ ಗಂಡ ಹೇಳ್ತಾರಂತೆ, "ಹುಟ್ಟಿದರೆ  ಬೆಕ್ಕು, ನಾಯಿಯಾಗಾದರೂ ಆಸ್ಟ್ರೇಲಿಯಾದಲ್ಲಿ ಹುಟ್ಟಬೇಕು" ಅಂತ. ಎಂತ ವಿಪರ್ಯಾಸ.. ಅಂದು ಪಂಪ ಹೇಳಿದ "ಮರಿ ದುಂಬಿಯಾಗಾದರೂ ಬನವಾಸಿಯಲ್ಲಿ ಹುಟ್ಟಿ ಬರಬೇಕೆಂಬುದು ನನ್ನ ಆಸೆ". ಅಣ್ಣಾವ್ರು " ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು" ಅಂದ್ರು. "ಜಹಾ  ಡಾಲ್ ಡಾಲ್ ಪರ್  ಸೋನೇಕಿ ಚಿಡಿಯಾ ಕರ್ತೀ ಹೈ  ಬಸೇರಾ, ಎಲ್ಲಿ ಮರಗಳ ಕೊಂಬೆ ಕೋಂಬೆಗಳ ಮೇಲೆ ಚಿನ್ನದ ಪಕ್ಷಿಗಳಿವೆಯೋ ಆ ದೇಶ , ಭಾರತ ದೇಶ ನನ್ನದು" ಎಂದರು ನಮ್ಮ ಪೂರ್ವಜರು. ನಿಜಕ್ಕೂ ಎಂಥ ದುಸ್ಥಿತಿ.
ಎಂದಿಗೂ ಸಮವಾಗದ ರಸ್ತೆಯ ಮೇಲಿನ  ಗುಂಡಿಗಳು, ಕಾಮಗಾರಿಗೆಂದು  ಚಪ್ಪಡಿಗಳ ತೆರೆದ    ಚರಂಡಿಗಳು, ಎಲ್ಲೆಲ್ಲೂ ಕಾಣುವ ಕಸದ ರಾಶಿಗಳು . ಗಾರ್ಡನ್ ಸಿಟಿ ಈಗ ಗಾರ್ಬೇಜ್ ಸಿಟಿ ಆಗಿದೆ. ನಾವು ಕೊಡುವ ತೆರಿಗೆ ಹಣ ಎಲ್ಲಿ ಹೋಗುತ್ತದೆ.
ಆಕೆ ಹೇಳಿದರಲ್ಲಿ ತಪ್ಪಿಲ್ಲ, ಆಸ್ಟ್ರೇಲಿಯಾದಲ್ಲಿ ರಸ್ತೆ ಕಾಮಗಾರಿ ಮಾಡಬೇಕಾದರೆ ಸ್ಥಳೀಯರಿಗೆ ವಿಚಾರ ತಿಳಿಸಿ, ಕ್ಷಮೆ ಕೋರಿ, ಒಂದು ಬೋರ್ಡ್ ನೇತುಹಾಕಿ ಬೇಗ ಕೆಲಸವನ್ನು ಚೊಕ್ಕಟವಾಗಿ  ಮುಗಿಸಿ  ಹೋಗುತ್ತಾರಂತೆ. ಅದೇ ನಮ್ಮ ಬೆಂಗಳೂರಿನಲ್ಲಿ ಮಳೆಗಾಲದಲ್ಲಿ ಚರಂಡಿ ನೀರು ಮನೆಯೊಳಗೆ   ನುಗ್ಗಿದೆ ಎಂದು  ದೂರು ಕೊಟ್ಟರೆ, ಚರಂಡಿಗಳನ್ನೆಲ್ಲ ಒಡೆದು, ಮೇಲಿನ ಕಾಂಕ್ರೀಟ್ ಮುಚ್ಚುಗೆಗಳನ್ನು ತೆಗೆದು,ಹಾಗೆ ಬಿಟ್ಟು ನಿದ್ರಿಸುತ್ತಿದ್ದಾರೆ ನಮ್ಮ ಶಾಸಕರು. ಚರಂಡಿಯಲ್ಲಿ ಅರ್ಧ ಪ್ಲಾಸ್ಟಿಕ್ ಕಸ, ಮಳೆ ಬಂದಾಗ ಅದು  ಬ್ಲಾಕ್ ಆಗದೆ ಏನಾಗುತ್ತದೆ. ಆದರೆ ಇದಕ್ಕೆ ಸರ್ಕಾರ ಮಾತ್ರ ಹೊಣೆಯ? ಇಲ್ಲ ಸಾರ್ವಜನಿಕರಲ್ಲೂ  ಲೋಪಗಳಿವೆ. ವಿದ್ಯಾವಂತರೂ ಎಲ್ಲೆಂದರಲ್ಲಿ ಕಸ ಎಸೆಯುವುದು.  ನಾವು ನಮ್ಮ ಶಾಸಕರು, ಕಾರ್ಪೊರೇಟರ್ ಗಳಿಗಿಂತ ಸೋಮಾರಿಗಳು. ನಮ್ಮ ಕೂಗು ಗಟ್ಟಿಯಾಗಿಲ್ಲ, ಜನರಲ್ಲಿ ಒಗ್ಗಟ್ಟಿಲ್ಲ, ವಿಧಾನಸೌಧ ದಲ್ಲಿ ಕುಳಿತಿರುವ,   ನಮ್ಮ ತೆರಿಗೆ ಹಣವನ್ನು ಅನುಭವಿಸುತ್ತಿರುವ ಪ್ರತಿಯೊಬ್ಬರ ಕಿವಿಗೂ ಕೇಳುವತೆ ಧ್ವನಿ ಏರಿಸಬೇಕು. ಏಳಿ  ಎದ್ದೇಳಿ ... ಈ ಗಾರ್ಬೇಜ್ ಸಿಟಿ ಗಾರ್ಡನ್ ಸಿಟಿ ಆಗುವವರೆಗೂ ನಿದ್ದೆ ಮಾಡಬೇಡಿ. 
ಇದು ನಮ್ಮ ಬೆಂಗಳೂರು, ನಮ್ಮ ರಾಜ್ಯ, ನಮ್ಮ ದೇಶ.. ಇದನ್ನು ಬಿಟ್ಟು ಓಡುವುದು ಎಲ್ಲಿಗೆ ? ಇಲ್ಲಿ ಸವಾಲುಗಳಿವೆ. ಎದಿರಿಸೋಣ ... ಮುಂದೆ .. ಮತ್ತೊಬ್ಬ ಪಂಪ ಹುಟ್ಟಿ ಬಂದು ... " ಆರಂಕುಸ ಮಿಟ್ಟೊಡಂ  ನೆನೆವುದೆನ್ನ ಮನಂ ..  ಬೆಂಗಳೂರು ನಗರಂ" ಎನ್ನಬೇಕು.  ಆ ರೈಲು ಸಂಗಾತಿಯ ವಿಷಯಗಳು ನಿರಾಸೆ ಉಂಟುಮಾಡಿದ್ದು ನಿಜ. ಆದರೆ ಚಿಂತನೆಗೆ ಒಳಪಡಿಸಿದವು.
ಜೈ ಬೆಂಗಳೂರು. ಜೈ ಕರ್ನಾಟಕ , ಜೈ ಭಾರತ.
ಕವಿತಾ ವಿ ರಾವ್

















Tuesday, December 17, 2019

ಬಸ್ಸು ಬರಲಿಲ್ಲ ಅಂತ ರಿಕ್ಷಾ ಹತ್ತಿದೆ

ನಾವು ಶಾಲೆಯಲ್ಲಿ ಓದುವಾಗ , ಒಂದು ವಾಕ್ಯವನ್ನು ಕೊಟ್ಟು ಸಂದರ್ಭ ಸಹಿತ ವಿವರಿಸಿ  ಎಂದು ಕೇಳುತ್ತಿದ್ದದು.  ಮೇಲಿನ ವಾಕ್ಯಕ್ಕೆ ಅದನ್ನೇ ಬರೆಯ ಹೊರಟಿದ್ದೇನೆ.
ಒಮ್ಮೆ,  ದ. ರಾ. ಬೇಂದ್ರೆ  ಅವರು ಬೆಂಗಳೂರಿಗೆ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದರು. ದೊಡ್ಡರಂಗೇ ಗೌಡರು  ಬೇಂದ್ರೆ ಅವರನ್ನು  ರೈಲು ನಿಲ್ದಾಣದಿಂದ   ಕರೆದು ಕೊಂಡು  ಬರಲು ಹೋದರು.  ಅಲ್ಲಿ ಬೇಂದ್ರೆ ಅವರು ಕಾಣಲಿಲ್ಲ. ಆಗ ತಾನೇ ರೈಲು ಬಂದು ಹೊರಟು  ಹೋಗಿತ್ತು. ಗೌಡರಿಗೆ ಗಾಭರಿಯಾಗಿ ಬಸ್ ನಿಲ್ದಾಣಕ್ಕೆ ಹೋದಾಗ, ಅಲ್ಲಿ ಬೇಂದ್ರೆ ಅವರು ಒಂದು ಕಾಗದದಲ್ಲಿ ಏನೋ ಬರೆದುಕೊಳ್ಳುತ್ತಿದ್ದರು.  ನಂತರ ಆ ದಿನದ ಕಾರ್ಯಕ್ರಮ ಶುರುವಾದಾಗ ಬೇಂದ್ರೆ ಅವರು ತಮ್ಮ  ಬೆಳಗಿನ ಅನುಭವವನ್ನು ಹೇಳುತ್ತಾ ಮೇಲಿನ ವಾಕ್ಯವನ್ನು ಬಿಡಿ  ಬಿಡಿಯಾಗಿ ಹೇಳಿದರು. ಯಾರಿಗೂ ಅರ್ಥ ಆಗಲಿಲ್ಲ. ಇದೇನಪ್ಪ.. ಬಸ್ ಬರಲಿಲ್ಲ ಅಂದ್ರೆ  ರಿಕ್ಷಾ ಹತ್ತೋದು, ಇದರಲ್ಲೇನಿದೆ ಅಂದುಕೊಂಡರಂತೆ. ನಂತರ ಬೇಂದ್ರೆ ಅವರು ಮತ್ತೆ ಹೇಳಿದರಂತೆ,  "ಬಸ್ಸು ಬರಲಿಲ್ಲ...  ಅಂತರಿಕ್ಷಾ ಹತ್ತಿದೆ". ಈಗ ಅರ್ಥ ಆಯಿತಾ. ಅವರು ಬಸ್ಸಿಗಾಗಿ ಕಾಯುತ್ತ ಅಂತರಿಕ್ಷ ಹತ್ತಿದ್ದರು.. ಭಾವನಾ ಲೋಕದಲ್ಲಿ ಹೊಸ ಕವಿತೆಯ ಅನ್ವೇಷಣೆ ಮಾಡುತ್ತಿದ್ದರು. ಅದಕ್ಕೆ ಹೇಳೋದು ಬೆಂದರೆ ಬೇಂದ್ರೆ  ಆಗುತ್ತಾರೆ ಅಂತ . ಅಲ್ಲ ... ಬೆಂದು ಬೆಂದು ಬೇಂದ್ರೆ  ಆದರು.
ಈ ಘಟನೆಯನ್ನು  ದೊಡ್ಡರಂಗೇ ಗೌಡರು ಮೊನ್ನೆ ರವೀಂದ್ರ ಕಲಾಕ್ಷೇತ್ರ ದಲ್ಲಿ  ಪ್ರಣತಿ ಪ್ರತಿಷ್ಠಾನದವರು ಹಮ್ಮಿಕೊಂಡಿದ್ದ   ಕವಿಗೋಷ್ಠಿಯಲ್ಲಿ ಬೇಂದ್ರೆ ಅವರನ್ನು ಸ್ಮರಿಸಿದ ಪರಿ.
ಕವಿತಾ ವಿ ರಾವ್ . 

Sunday, December 15, 2019

ಭೀಮ


ಪ್ರತಿನಿತ್ಯದಂತೆ ಅಂದು ನಾನು ದ್ವಿಚಕ್ರ ವಾಹನ ಹತ್ತಿ ಕಚೇರಿಗೆ ತೆರಳುತ್ತಿದ್ದೆ.   ದಾರಿಯಲ್ಲಿ ಒಂದು ತಿರುವು, ಅಲ್ಲಿ  ನಿತ್ಯ ಕೆಲವು ಸರ್ಕಾರಿ ಶಾಲೆಯ ಮಕ್ಕಳು  ಲಿಫ್ಟ್ ಕೇಳುವುದುಂಟು. ಅವರನ್ನು ಕಂಡರೆ ನನಗೆ ಎಲ್ಲಿಲ್ಲದ ಕೋಪ . ನಾವು ಸಣ್ಣವರಾಗಿದ್ದಾಗ ಶಾಲೆಗೆ ಕಾಲು ನಡಿಗೆಯೆಲ್ಲೆ ಹೋಗುತ್ತಿದ್ದುದು. ೧-೨ ಕಿ.ಮೀ ದೂರ ಇದ್ದರೂ, ಸ್ನೇಹಿತರೊಡನೆ ಹರಟೆ ಹೊಡೆಯುತ್ತಾ
ನಡೆಯುತ್ತಿದ್ದೆವು. ಈಗಿನ ಕಾಲದ ಮಕ್ಕಳಿಗೆ ನಡೆಯುವುದಕ್ಕೆ ಸೋಮಾರಿತನ. ಇದರಿಂದ ಇನ್ನೊಂದು ಸಮಸ್ಯೆಯೇನೆಂದರೆ, ಈ  ಮಕ್ಕಳು  ಬಾಲ್ಯದಿಂದಲೇ ಇನ್ನೊಬ್ಬರ ಮೇಲೆ  ಆಧಾರವಾಗುವುದು. "ಯಾರೋ ನನಗೆ ಸಹಾಯ ಮಾಡ್ತಾರೆ "  ಅಂತ  ನಿರೀಕ್ಷಿಸೋದು. ಇವರು ಸ್ವಾವಲಂಬಿಗಳಾಗೋದು ಯಾವಾಗ? ಸರಿ ನಮ್ಮ ಮಕ್ಕಳೇನಾದರೂ ನಡಿತಾರಾ ಅಂದ್ರೆ, ಅವರೂ ಸೋಮಾರಿಗಳೇ. ಮಳೆ ಬಂದು ರಸ್ತೆ ಕೆಸರಾಗಿದ್ದಾಗ ದ್ವಿಚಕ್ರ ವಾಹನದಲ್ಲಿ ನನ್ನ ಹಿಂದೆ ಕುಳಿತಿರುತ್ತಿದ್ದ ನನ್ನ ಮಕ್ಕಳು ಮನೆ ಬರುವತನಕ ಇಳಿಯುತ್ತಿರಲಿಲ್ಲ. ಕಾಲ ಬದಲಾಗಿ, ನಮ್ಮ ಮಕ್ಕಳಿಗಿರುವ ಸೌಕರ್ಯ ಇವರಿಗೆ ಯಾಕೆ ಕೊಡಬಾರದು ಅಂತ ಒಂದು ದಿನ ಒಬ್ಬ ೭ ನೇ ತರಗತಿಯ ಹುಡುಗನಿಗೆ ಲಿಫ್ಟ್ ಕೊಟ್ಟೆ. ಅವನು ನನ್ನ ವಾಹನ ಹತ್ತಿದ, ನಾನು  ನನ್ನ ಧಾಟಿಯಲ್ಲಿ
"ಏನಪ್ಪಾ ನಿನ್ನ ಹೆಸರು" ಎಂದೆ . ತನ್ನ ಹೆಸರು ಭೀಮೇಶ್ವರ ಅಂತ ಹೇಳಿದ. ನಿನ್ನ ಹೆಸಿರಿನ ಅರ್ಥ ಗೊತ್ತಾ ಎಂದು ಮರು ಪ್ರಶ್ನೆ ಹಾಕಿದೆ . ದೇವರ ಹೆಸರು ಎಂದ. ನನಗೆ ಮಹಾಭಾರತ ಭೀಮ ಗೊತ್ತಿತ್ತು, ನಾನೇನೋ ಮಹಾಭಾರತವನ್ನು ಅರಿದು ಕುಡಿತಂತೆ ಭೀಮ ಯಾರು ಗೊತ್ತಾ , ಭೀಮನ ಕತೆ ಕೇಳಿದೆಯಾ ಎಂದೆ . ನಮ್ಮ ಮನೇಲಿ ಟಿವಿ ಇಲ್ಲ ಅಂತ ಹೇಳಿದ. ಶಾಲೆಯಲ್ಲಿ ಟೀಚರ್ ಈ ಕತೆ ಹೇಳಿಲ್ವ ಅಂತ ಕೇಳಿದ್ದಕ್ಕೆ  "ಆ ಪಾಠ ಮಾಡುವಾಗ ನಾನು ಶಾಲೆಗೇ ಹೋಗಿರಲಿಲ್ಲ" ಅಂದುಬಿಟ್ಟ. ನನಗೆ ಸಿಕ್ಕಿದ್ದೇ ಅವಕಾಶ ಅಂತ ... " ಮಹಾಭಾರತದಲ್ಲಿ ಪಾಂಡವರು  ಐದು ಮಂದಿ ಅದರಲ್ಲಿ ಎರಡನೆಯವ ಭೀಮ ... ನಿನ್ನ ಟೀಚರ್ ಹತ್ರ ಕೇಳಿ ಮಹಾಭಾರತದ ಕತೆ ತಿಳಿದುಕೋ" ಅಂತ ಚೆನ್ನಾಗಿ ಕೊರೆದು ಬಿಟ್ಟೆ. ಇನ್ನೊಮ್ಮೆ ನನ್ನನ್ನು ಕಂಡ್ರೆ ಓಡಿ  ಹೋಗ್ತಾನೋ ಏನೋ.  ಆದರೆ ನನಗೆ ಇಲ್ಲಿ ಅರ್ಥ ಆದದ್ದು ಒಂದು ವಿಷಯ. ನನಗೆ ಗೊತ್ತಿದ್ದ ಭೀಮ ಬೇರೆ, ಭೀಮೇಶ್ವರ ಅಂದ್ರೆ  ಶಿವನ ರೂಪ, ಭೀಮಶಂಕರ ಶಿವನ ದ್ವಾದಶ ಲಿಂಗಗಳಲ್ಲಿ ಒಂದು. ಭೀಮ ಹನುಮಂತನಂತೆ ವಾಯುಪುತ್ರನಾದರೂ ಶಿವನ ಅಂಶ. ಕರ್ನಾಟಕದಲ್ಲಿ ಭೀಮೇಶ್ವರ ದೇವಸ್ಥಾನಗಳಿವೆ.  ಭೀಮನಿಗೆ ಆ ಹೆಸರು ಬಂದದ್ದು ಈಶ್ವರನಿಂದ.
ನಮಗೆ ತಿಳಿದಿರೋ ಅಲ್ಪ ಜ್ಞಾನಕ್ಕೆ  ಎಲ್ಲಾ ತಿಳಿದಿರುವಂತೆ ಬೀಗುತ್ತೇವೆ. ಎಲ್ಲಿಯ ತನಕ "ಆಹಂ" , " ಮಮ" ಶಬ್ದಗಳನ್ನು ಬಿಡುವುದಿಲ್ಲವೋ, ಅಲ್ಲೀತನಕ ನಾವು ಉದ್ಧಾರ ಆಗೋದಿಲ್ಲ.  ಕನಕದಾಸರು ಹೇಳುವಂತೆ " ಸ್ವರ್ಗಕ್ಕೆ  'ನಾನು' ಹೋದರೆ ಹೋದೆನು".  ಎಷ್ಟು ನಿಜ!!!! ನಾನು ಇರುವ ತನಕ ಈ 'ನಾನು' ವನ್ನು ಕಟ್ಟಿಕೊಂಡು ತಿರುಗುತ್ತೇವೆ.

ಕವಿತಾ ವಿ. ರಾವ್












Thursday, December 12, 2019

ಹೀಗೊಂದು ಸವಿ ನೆನಪು

 ಇಂದಿಗೆ ಸುಮಾರು ೨೮ ವರ್ಷಗಳ ಹಿಂದೆ ನಡೆದ  ಘಟನೆ.  ಅದು ೧೯೯೦ ನೇ ಇಸವಿ ಜುಲೈ ತಿಂಗಳು.ನನಗಾಗ ೧೭ ವರ್ಷ ವಯಸು. ಹೈದರಾಬಾದಿನ  ನನ್ನ ದೊಡ್ಡಪ್ಪನ ಮನೆಗೆ ಬೆಂಗಳೂರಿನಿಂದ ಬಸ್ ನಲ್ಲಿ ಹೊರಟೆ. ಇಲ್ಲಿ ರಾತ್ರಿ ಕುಳಿತರೆ ಮರುದಿನ  ಬೆಳಗ್ಗೆ ಹೈದರಾಬಾದ್ ತಲುಪುತ್ತೇವೆ. ಒಬ್ಬಳೇ ಪ್ರಯಾಣ ಮಾಡುತ್ತಿದ್ದೆ. ರಾತ್ರಿ  ನಿದ್ದೆ ಸರಿಯಾಗಿ ಬರುತ್ತಿರಲಿಲ್ಲ. ಮುಂದಿನ ಮಹಿಳೆಯರ ಸೀಟ್ ನಲ್ಲಿ ಕುಳಿದಿದ್ದೆ. ಎದುರಿನಿಂದ ಬರುತ್ತಿದ್ದ ಬಸ್ಸುಗಳ ಲೈಟು ಕಣ್ಣಿಗೆ ಹೊಡೆಯುತ್ತಿತ್ತು. ಆಲೋಚನೆಗಳು ಎಲ್ಲೆಲ್ಲೋ ಹೋಗುತ್ತಿದ್ದವು. ಹೀಗೊಂದು ಘಟನೆಯನ್ನು ನಾನು ಊಹಿಸಿಕೊಳ್ಳುತ್ತಿದ್ದೆ, ಒಬ್ಬ ವಯಸ್ಸಾದ ವ್ಯಕ್ತಿ ಬೆಂಗಳೂರಿನ ಬಸ್ ನಿಲ್ದಾಣದಲ್ಲಿ ಇಳಿಯುತ್ತಾರೆ. ಅವರಿಗೆ ರಾಜಾಜಿನಗರಕ್ಕೆ ತಮ್ಮ ಬಂಧುಗಳ ಮನೆಗೆ ಹೋಗಬೇಕು  ಆದರೆ ಹೇಗೆ ಹೋಗುವುದು ತಿಳಿಯುವುದಿಲ್ಲ. ನನ್ನನ್ನು ಕೇಳುತ್ತಾರೆ, ನಾನು ಅವರಿಗೆ ಸಹಾಯ ಮಾಡುವ ಸಲುವಾಗಿ ಅವರನ್ನು ರಾಜಾಜಿನಗರದ ಅವರ ಬಂಧುಗಳ ಮನೆ ತನಕ ಕರೆದುಕೊಂಡು ಹೋಗಿ ಬಿಟ್ಟು ನಂತರ  ನನ್ನ ಮನೆಗೆ ಹೋಗಿ ಬಿಡುತ್ತೇನೆ. ಇದು ನನ್ನ ಊಹೆಯಲ್ಲಿ ನಡೆದ ಘಟನೆ. ಹೇಗೋ ನಿದ್ದೆ ಹತ್ತಿತು. ಬೆಳಕು ಹರಿಯುವ ಮುನ್ನವೇ ಹೈದರಾಬಾದ್ ಬಸ್ ನಿಲ್ದಾಣ ತಲುಪಿದೆ. ಇಳಿದೆ, ದೊಡ್ಡಪ್ಪ ನನ್ನನ್ನು ಕರೆದುಕೊಂಡು ಹೋಗಲು ಬರುವರೆಂದು ಕಾದೆ. ೭ ಆಯಿತು, ೮ ಆಯಿತು ಯಾರದು ಸುಳಿವಿಲ್ಲ. ನನ್ನ ಬಳಿ ವನಸ್ಥಲಿಪುರಂ ಸಿ-೪೪೪ ವಿಳಾಸ ಬಿಟ್ಟು ಇನ್ನೇನೂ ಇಲ್ಲ. ಹಾಗೆ ಒಬ್ಬಳೇ ಇದ್ದಿದ್ದು ಕಂಡು, ಆಟೋ
ಚಾಲಕರೊಬ್ಬರು ಇಬ್ಬರು ನನ್ನ ಬಳಿ ಬಂದು ಎಲ್ಲಿಗೆ  ಹೋಗಬೇಕು ಎಂದು ಪೀಡಿಸತೊಡಗಿದರು. ಇದನ್ನೆಲ್ಲಾ ಗಮನಿಸುತ್ತಿದ್ದ ಒಬ್ಬ ಯುವಕ ನನ್ನನ್ನು ಕರೆದು ಹಾಗೆಲ್ಲ ಆಟೋದಲ್ಲಿ ಹೋಗಬೇಡ. ನನ್ನ ಮಾವ ಬೆಂಗಳೂರಿನಿಂದ ಬರುತ್ತಿದ್ದಾರೆ. ಅವರು ಬಂದೊಡನೆ  ಬಸ್ ನಿಲ್ದಾಣದಲ್ಲಿ ಬಿಡುತ್ತೇನೆ ಎಂದನು. ಆತನೊಟ್ಟಿಗೆ ಆತನ ಸ್ನೇಹಿತನು ಇದ್ದನು. ಅವರಿಬ್ಬರೊಟ್ಟಿಗೆ  ಅವರು ಯಾವ ಕಾಲೇಜಿನಲ್ಲಿ ಓದುತ್ತಿದ್ದಾ ರೆ... ಇನ್ನಿತರ ವಿಷಯಗಳನ್ನು ಚರ್ಚಿಸುತ್ತಾ ಕೂತೆ . ಎಷ್ಟು ಹೊತ್ತಾದರೂ ನನ್ನ ದೊಡ್ಡಪ್ಪ ನನ್ನನ್ನು ಕರೆದು ಕೊಂಡು ಹೋಗಲು ಬರಲಿಲ್ಲ.  ಅವರ ಮಾವನ ಸುದ್ದಿಯೂ ಇರಲಿಲ್ಲ. ಆಗ ಆ ಹುಡುಗ ದೂರವಾಣಿ ಕರೆಯನ್ನು ಮಾಡಿ ಬಂದು ನನಗೆ ಹೇಳಿದ, " ನನ್ನ ಮಾವ ನಮ್ಮ ಮನೆಗೆ ಹೋಗಿದ್ದಾರೆ, ಈಗ ನಾನು ನಿನ್ನನ್ನು ವನಸ್ಥಲಿಪುರಂ ತನಕ ಬಿಟ್ಟು ಬರುತ್ತೇನೆ " ಎಂದ. ಧೈರ್ಯವಾಗಿ "ಜೈ ಹನುಮಾನ್'ಎಂದು ಅವರ ಕಾರಲ್ಲಿ ಕೂತೆ. ಹಿಂದಿ ಸಿನೆಮಾ ಹಾಡೊಂದು ಕೇಳಿ ಬರ್ತಾ ಇತ್ತು. ಈಗಲೂ ನೆನಪಿದೆ ದಿಲ್ ಸಿನೆಮಾದ ' ಓ ಪ್ರಿಯ ಪ್ರಿಯ". ಸುತ್ತ ನೋಡುತ್ತಾ ಕುಳಿತೆ. ಈಗಿನ ಹಾಗೆ ಗೂಗಲ್ ಮ್ಯಾಪ್ ಇಲ್ಲ. ೧೦೦ ವಿ ಬಸ್ಸು ವನಸ್ಥಲಿಪುರಂ ಕಡೆ ಹೋಗುವ ಬಸ್ಸುಗಳು ಹೋಗುವುದನ್ನು ಕಂಡೆ. ಅದು .. ಇದು..  ಅಂತ ಮಾತನಾಡುತ್ತಲೇ ಇದ್ದೆ. ಕಡೆಗೆ ವನಸ್ಥಲಿಪುರಂ ಸಿ-೪೪೪ ಮನೆಯನ್ನು ಹುಡುಕಿ ಅದರೆದಿರು ನಿಲ್ಲಿಸಿದಾಗ ರಾಜಕುಮಾರಿಯಂತೆ ಕಾರಿನಿಂದ ಇಳಿದೆ. ದೊಡ್ಡಮ್ಮ -ದೊಡ್ಡಪ್ಪ ಗೆ ಆಶ್ಚರ್ಯ. ಆ ಇಬ್ಬರು ಹುಡುಗರನ್ನು ಒಳಗೆ ಕರೆದು ಕಾಫಿ ಕೊಟ್ಟು ಮಾತನಾಡಿಸಿದರು. ನಂತರ ಅವರು ನಾವು ಹೋಗಿಬರುತ್ತೇವೆ ಎಂದು ಹೊರಟು  ಹೋದರು. ಆಗ ನೆನಪಾಯಿತು, ಅವರ ಹೆಸರು ಕೇಳಲಿಲ್ಲ, ವಿಳಾಸ ಕೇಳಲಿಲ್ಲ, ಥ್ಯಾಂಕ್ಸ್  ಸಹಾ ಹೇಳಲಿಲ್ಲ. ದೇವರೇ ನನಗಾಗಿ ಅವರನ್ನು ಕಾಲಿಸಿದರು  ಎಂದು ತಿಳಿದು ಜೈ ಹನುಮಾನ್ ಗೆ ಕೈ ಮುಗಿದೆ. ನಮ್ಮ ಸಕಾರಾತ್ಮಕ ಚಿಂತನೆಗಳು ನಮ್ಮನ್ನು ಹೇಗೆ ಸುರಕ್ಷಿತವಾಗಿ ಇಡುತ್ತವೆ ಎಂಬುದಕ್ಕೆ ಈ ಘಟನೆ  ಒಂದು ಉದಾಹರಣೆ.







Wednesday, December 11, 2019

ಎಂದು ನಮಗೆ ನಿರ್ಭಯ ??



ಹೈದರಾಬಾದಿನಲ್ಲಿ ನಡೆದ ಅತ್ಯಾಚಾರದ ಬಗ್ಗೆ ದೇಶದಾದ್ಯಂತ ಚರ್ಚೆ ನಡೆಯುತ್ತಿದೆ. ಇಲ್ಲಿ ಕೆಲವು ವಿಷಯಗಳ ಆತ್ಮಾವಲೋಕನ ಬಹು ಮುಖ್ಯ. ನನ್ನ ಅನಿಸಿಕೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ.  ಇದಕ್ಕೆ ಕಾರಣ ಇಷ್ಟೇ .. ಘಟನೆ ಏಕೆ ನಡೆಯಿತು ಹಾಗೂ  ಮುಂದೆ ನಾವು ಹೇಗೆ ಎಚ್ಚರಿಕೆಯಿಂದ ಇರಬೇಕು. ಒಂದೊಂದೇ ಎಳೆ ಗಳನ್ನು ಬಿಡಿಸೋಣ. ಅತ್ಯಾಚಾರವಾದ     ದಿನ ಪೋಲೀಸರ ವರ್ತನೆ ಸರಿಯಿರಲಿಲ್ಲ.  ದೂರು ಕೊಡಲು ಪೊಲೀಸ್ ಠಾಣೆಗೆ ಹೋದರೆ ನಿಮ್ಮ ಹುಡುಗಿಗೆ  ಪ್ರಿಯಕರ ಇದ್ದಾನಾ ?  ನೀವು ಬೇರೆ ಠಾಣೆ ಯಲ್ಲಿ ದೂರು ಕೊಡಬೇಕು ಇತ್ಯಾದಿ.
ಒಂದು ಸಲ ಪೋಲೀಸರ ದೃಷ್ಟಿಯಿಂದ ಆಲೋಚಿಸೋಣ. ಅಲ್ಲಿಗೆ ಬರುವ ಈ ರೀತಿ ದುರುಗಳಲ್ಲಿ ಶೇಖಡಾ ೯೦ ರಷ್ಟು ಪ್ರಿಯಕರನೊಂದಿಗೆ ಓಡಿಹೋದವುಗಳೇ. ಅವರಿಗೆ ಸತ್ಯವಾದ  ವಿಷಯ ತಿಳಿದರೆ ಆ ದಿಕ್ಕಿನಲ್ಲಿ ತನಿಖೆ ಮಾಡಬಹುದು. ನಮ್ಮ  ಹೆಣ್ಣುಮಕ್ಕಳೆಲ್ಲಾ ಸರಿಯಾಗಿದ್ದಾರಾ?

ಕೊನೆಯದು ಆ ಅಪರಾಧಿಗಳನ್ನು ಎನ್ ಕೌಂಟರ್  ಮಾಡಿದ್ದು. ಕೋರ್ಟು ಕಚೇರಿ  ಅಂತ ವರ್ಷಾನುಗಟ್ಟಲೆ ತಿರುಗುವ ಬದಲು  ಬೇಗ ಶಿಕ್ಷೆ ಕೊಡುವ ನಿಟ್ಟಿನಲ್ಲಿ ಅವರನ್ನು ಕೊಂದರು. ಇದರಲ್ಲಿ ತಪ್ಪು ಸರಿ ತನಿಖೆಯ ನಂತರ ಇತ್ಯರ್ಥವಾಗಲಿ.
ಇನ್ನೊಂದು ಚರ್ಚೆ, ಅಪರಾಧಿಗಳೆಲ್ಲಾ ಮುಸಲ್ಮಾನರು. ಇದು ತಪ್ಪು ಕಲ್ಪನೆ, ಅಪರಾಧ ಮಾಡುವವನಿಗೆ  ಧರ್ಮ  ಇಲ್ಲ. ಅವನು ಎಲ್ಲವನ್ನೂ ಬಿಟ್ಟವನು. ಧರ್ಮ , ದೇವರು, ನಂಬಿಕೆ, ಸರಿ ತಪ್ಪುಗಳ ಅರಿವು ಇರುವವನು ಎಂದಿಗೂ ಈ ರೀತಿ ಮಾಡುವುದಿಲ್ಲ.
ಇದೇ  ನಮಗೆ ಪರಿಹಾರವನ್ನು ಸೂಚಿಸುತ್ತದೆ. ಸಮಾಜದಲ್ಲಿ ದೇವರ ಮೇಲೆ ನಂಬಿಕೆ ಹೆಚ್ಚಾಗಬೇಕು. ನಾವು ಮಾಡುವ ಸರಿ ತಪ್ಪುಗಳನ್ನು ವೀಕ್ಷಿಸುವವನು ಒಬ್ಬ ಇದ್ದಾನೆ ಎಂಬ ಧೃಢವಾದ ನಂಬಿಕೆ ಇರಬೇಕು. ಧರ್ಮ  ಗುರುಗಳಿಗೆ  ಇದೊಂದು ದೊಡ್ಡ ಜವಾಬ್ದಾರಿ. ಜನರನ್ನು ತಪ್ಪು ದಾರಿ ಹಿಡಿಯುವುದರಿಂದ ರಕ್ಷಿಸುವುದು.
ದೇವರೇ ಇಲ್ಲ ಎಂಬುವ ನಾಸ್ತಿಕರಿಗೂ ಪರಿಹಾರ ಉಂಟು . ಅದೇ ಸಕಾರಾತ್ಮ ಚಿಂತನೆ (Positive thinking). ಇತರರಿಗೆ ಸಹಾಯ ಮಾಡಬೇಕು ಎಂಬ ಭಾವನೆ ಮನದಲ್ಲಿದ್ದರೆ ಸಾಕು, ಆ ಮನುಷ್ಯ ಸುರಕ್ಷಿತವಾಗಿರುತ್ತಾನೆ. ನಾನು ಮಾಡುವ ಪಾಪ ಕರ್ಮಗಳು ನಮ್ಮನ್ನು ಜನ್ಮಗಳ ನಂತರವೂ   ಕಾಡುತ್ತದೆ.

ಇನ್ನೊಂದು ಮುಖ್ಯವಾದ ವಿಷಯ. ಎಲ್ಲ ಕ್ರಿಯೆಗೂ ಪ್ರೇರಣೆಯೇ  ಪ್ರಮುಖ ಕಾರಣ.  ಅತ್ಯಾಚಾರ ಇರಲಿ, ಕೊಲೆ ಇರಲಿ ಅದಕ್ಕೊಂದು ಪ್ರೇರಣೆ ಇದ್ದೇ ಇರುತ್ತದೆ. ಚರಿತ್ರೆ ಇದನ್ನು ಬಲಪಡಿಸುತ್ತದೆ. ಪುರಾಣದ ಕತೆಗಳನ್ನು ಬಿಡಿ.  ಹೊಸ ' ಪಿಂಕ್ ' ಸಿನಿಮಾ ವನ್ನು ಉದಾಹರಣೆಗೆ ತೆಗೆದುಕೊಳ್ಳಿ. ಅರೆ ನಗ್ನ ವಾಗಿ ಪುರುಷರ ಕೋಣೆಗೆ ಹೋಗುವುದೊಂದೇ ಪ್ರೇರಣೆ ಅಲ್ಲ. ಸಿನಿಮಾದ ಘಟನೆಗಳನ್ನು ಮೆಲುಕು ಹಾಕಿ, ಆ ಹುಡುಗಿ ತಾನು ವರ್ಜಿನ್ ಅಲ್ಲ  ಎನ್ನುತ್ತಾಳೆ. ೪ ಜನರೊಟ್ಟಿಗೆ ಮಲಗಿದವಳು ನನ್ನಜೊತೆ ಮಲಗಿದರೆ ತಪ್ಪೇನು ಅಂತ ಆ ಭಂಡ ಹುಡುಗರ ಮನೋಭಾವ. ಈಗ ಎಲ್ಲೆಡೆ ಆಲಿಂಗನದ ಸಂಸ್ಕೃತಿ (hugging culture). ಸಾರ್ವಜನಿಕ ಪ್ರದೇಶಗಳಲ್ಲಿ ಪ್ರಿಯಕರನನ್ನು ಆಲಿಂಗಿಸಿ , ಚುಬಿಸಿ , ಬಾಯ್ ಬಾಯ್  ಹೇಳಿ ಬಸ್ ನಲ್ಲಿ ಕುಳಿತರೆ, ಆಕೆಯ ಬಗ್ಗೆ ಬಸ್ ಚಾಲಕ  ಏನಂತ ತಿಳೀತಾನೆ. ಇವಳು  ಸಾರ್ವಜನಿಕರ ಸ್ವತ್ತು. ನಾವೂ ಪ್ರಯತ್ನಿಸಬಹುದು ಅಂತ  ಹೆಗಲ ಮೇಲೆ /ಸೊಂಟಕ್ಕೆ ಕೈ ಹಾಕುತ್ತಾನೆ.

ಎಲ್ಲಾ ಸಂದರ್ಭದ್ಲಲೂ ಹೀಗೆ ಆಗುತ್ತದೆ ಎಂದೇನಿಲ್ಲ. ಕೆಲವೊಮ್ಮೆ ನಾವು ಸರಿಯಾಗಿದ್ದರೂ ನಮ್ಮನ್ನು ಕೆಣಕುವವರು ಇರುತ್ತಾರೆ. ನಮ್ಮ ಸಕಾರಾತ್ಮಕ ಚಿಂತನೆ ಹಾಗು ಯೋಗಾಭ್ಯಾಸಗಳಿಂದ ನಮ್ಮ ಸುತ್ತ ಒಂದು ಸುರಕ್ಷತಾ ಪರದೆ ಹಾಕಿಕೊಳ್ಳಲು  ಸಾಧ್ಯವಿದೆ. ಆದಕ್ಕೆ   ಕಠಿಣ ಪ್ರಯತ್ನದ ಮತ್ತು ಅಭ್ಯಾ ಸದ ಅಗತ್ಯವಿದೆ.

ಕೊನೆಗೆ ನಾನು ಹೇಳುವುದು ಇಷ್ಟೇ , ನಮ್ಮ ಸುರಕ್ಷತೆ ನಮ್ಮ ಕೈಯಲ್ಲಿ ಇದೆ. ನಮ್ಮ ಹಿರಿಯರು ತೋರಿಸಿದ ಮಾರ್ಗದಲ್ಲಿ ನಡೆಯುವುದು, ಧರ್ಮದ ಬಗ್ಗೆ ಗೌರವವಿಡುವುದು, ಪ್ರಚೋದನೆಗೆ ಅವಕಾಶ ಕೊಡದಿರುವುದರಿಂದ  ನಮ್ಮನ್ನು ನಾವು ಸುರಕ್ಷಿಸಬಹುದು.