Friday, May 15, 2020

ಪ್ರೊ. ನಿಸಾರ್

ಪ್ರೊ. ನಿಸಾರ್ ಅವರ ಬಗ್ಗೆ ಚರ್ಚೆ ಆಗ್ತಾ ಇರೋದು ನೋಡಿದ್ರೆ,  ನನ್ನ ಮನದಾಳದ ಮಾತನ್ನು ಹಂಚಿಕೊಳ್ಳುವ ಆಸೆಯಾಗಿದೆ.
ಅವರ ನಿಧನದ ಮರುದಿನ ನನಗೆ ವಾಟ್ಸಾಪ್ ನಲ್ಲಿ ಈ ಕವನ " ನಿಮ್ಮೊಡನಿದ್ದು ನಿಮ್ಮಂತಾಗದೆ " ಬಂದಿತ್ತು. ಇದಕ್ಕೆ ಸ್ವಲ್ಪ ಪೀಠಿಕೆ ಕೂಡ ಇತ್ತು. ನನಗೆ ಆಗ ಸ್ವಲ್ಪ ಬೇಸರವಾಯಿತು. ಇಷ್ಟು ಒಳ್ಳೆಯ  ಕವಿಯನ್ನು ಮುಸಲ್ಮಾನರೆಂದು ಸಂಶಯವಾಗಿ ನೋಡಿದ್ದವರು ಯಾರೋ?... ಎಂದೆಲ್ಲಾ ಆಲೋಚಿಸಿದೆ. ಆದರೆ ಆ ಸಂದೇಶವನ್ನು ಬೇರೆಯವರಿಗೆ ರವಾನಿಸಲು ಮನಸು ಬರಲಿಲ್ಲ.  ಅದಕ್ಕೊಂದು ಕಾರಣ ಇದೆ. ಕಳೆದ ವರ್ಷ ಅಂದರೆ  ೨೦೧೯ ರ ನವಂಬರ್ ೧ ರಂದು ನಮ್ಮ  ಎನ್ ಎ ಎಲ್  ಕನ್ನಡ ಸಾಂಸ್ಕೃತಿಕ ಸಂಘ ನಿಸಾರ್ ಅವರ ಕವನಗಳನ್ನು ಹಾಡುವ ಮೂಲಕ ರಾಜ್ಯೋತ್ಸವವವನ್ನು ಆಚರಿಸಿದೆವು. ಇಲ್ಲಿ ನನ್ನ ಕೆಲವು ಸಹೃದಯ ಮಿತ್ರರು ಹಾಡುಗಳನ್ನು ಅಭ್ಯಾಸ ಮಾಡಿದರೆ, ನನಗೆ ಕಾರ್ಯಕ್ರಮದ ನಿರೂಪಣೆ ಮಾಡುವ ಹೊಣೆ  ಬಿದ್ದಿತ್ತು. ನಿಸಾರ್ ಅವರ ಬಗ್ಗೆ ಮಾಹಿತಿ ಸಂಗ್ರಹಿಸಲು ಜಾಲತಾಣಗಳಲ್ಲಿ ಹುಡುಕಾಡಿದೆ. ಆಗ ನನಗೆ ದೊರೆತದ್ದು ಅವರು ಡಿಡಿ ಚಂದನ ಗೆ ನೀಡಿದ ಸಂದರ್ಶನ.  ಅವರ  ಕವನಗಳ ಬಗ್ಗೆ ಅವರೇ ಹೇಳಿಕೊಂಡಿರುವ ವಿಷಯಗಳನ್ನು ಪೋಣಿಸಿ ನಿರೂಪಣೆಗೆ  ಸಾಮಗ್ರಿಯನ್ನು ತಯಾರಿಸಿಕೊಂಡಿದ್ದೆ. ಇನ್ನೊಂದು ವಾಹಿನಿಯಲ್ಲಿ, ಸಂದರ್ಶಕ ..." ನೀವು ಮುಸಲ್ಮಾನರಲ್ಲವೇ...  ಅದು ... ಇದು " ಎಂದು ಕೆಣಕುತ್ತಿದ್ದ. ಅದಕ್ಕವರು ಖಡಕ್ ಆಗಿ ನಾನು ಇಲ್ಲಿನವ ... ಇಲ್ಲಿನ ಸಂಸ್ಕೃತಿಯೇ ನನಗೆ ಎಲ್ಲ ಎಂದು ಬಿಟ್ಟರು.  ಹೀಗೆ ಅವರ ಬಗ್ಗೆ ಮಾಹಿತಿ ಸಂಗ್ರಹ ಮಾಡುತ್ತಾ ಅವರ ಅಭಿಮಾನಿಯಾಗಿಬಿಟ್ಟಿದ್ದೆ.  ಎಷ್ಟೆಂದರೆ... ಒಮ್ಮೆ ಅವರನ್ನು ಭೇಟಿ ಮಾಡಿ ಅವರ ಕಾಲಿಗೆ ನಮಸ್ಕಾರ ಮಾಡಬೇಕು ಎನ್ನುವಷ್ಟು ಅಭಿಮಾನ  ಹೆಚ್ಚಾಗಿತ್ತು.  ಆದರೆ... ದುರದೃಷ್ಟವಶಾತ್ ಅವರ ನಿಧನದ ವಾರ್ತೆ ತುಂಬಾ ನೋವನ್ನುಟು ಮಾಡಿತು..  ಕೆಲವು ದಿನಗಳ ನಂತರ ... ಸರ್ ನಿಮ್ಮ ಎಫ್ ಬಿ ಪೋಸ್ಟ್ ನಲ್ಲಿ ಇದೇ ಕವನದ ನಿಜವಾದ ಅರ್ಥ ಓದಿದ ಮೇಲೆ  ನೆಮ್ಮದಿಯಾಯಿತು. ತಕ್ಷಣ ನಿಮ್ಮ ಪೋಸ್ಟ್ ನ್ನು ಮೊದಲು ನನಗೆ ಆ ಕವನವನ್ನು ಕಳಿಸಿದ ವ್ಯಕ್ತಿಗೆ ರವಾನಿಸಿದೆ. 
ಸಾಹಿತಿಗಳ ಬಗ್ಗೆ ನಡೆಯುತ್ತಿರುವ ಚಿಂತನದಲ್ಲಿ  ಭಾಗಿಯಾಗಿರುವುದಕ್ಕೆ ಹರ್ಷ ವ್ಯಕ್ತ  ಪಡಿಸುತ್ತೇನೆ. 
ಧನ್ಯವಾದಗಳು . 

No comments:

Post a Comment