ದೆಹಲಿಯ ಕುತುಬ್ ಮಿನಾರ್ ಎದುರಿಗೆ ನಿಂತುಕೊಂಡು ನನ್ನ ಸ್ನೇಹಿತನಿಗೆ ಛಾಯಾಚಿತ್ರವನ್ನು ತೆಗೆಯಲು ಹೇಳಿದೆ . ನಾನು ಸಿನಿಮಾ ನಟನಂತೆ ಕೈಯಲ್ಲೊಂದು ಗುಲಾಬಿ ಹಿಡಿದು ನಗುಮೊಗವನ್ನು ಬೀರಲು ನನ್ನ ಸ್ನೇಹಿತ ಫೋಟೋವನ್ನು ಕ್ಲಿಕ್ಕಿಸಿದ. ನನ್ನ ಸಹೋದ್ಯೋಗಿಗಳ ಜೊತೆ ಉತ್ತರ ಭಾರತ ಪ್ರವಾಸಕ್ಕೆ ಬಂದು ಹತ್ತು ದಿನಗಳಾಗಿದ್ದವು . ಇನ್ನು ಐದು ದಿನಗಳ ನಂತರ ಬೆಂಗಳೂರಿಗೆ ಮರಳುವುದು . ಮರುದಿನ ತಾಜ್ ಮಹಲ್ ನೋಡಲು ಆಗ್ರಾ ಗೆ ಹೋಗಬೇಕು. ಇಡೀ ದಿನದ ಸುತ್ತಾಟದಿಂದ ಆಯಾಸವಾಗಿತ್ತು. ನಮ್ಮ ಹೋಟೇಲಿನ ಕೋಣೆಗೆ ಬಂದು ಮಲಗುವ ಮೊದಲು ನನ್ನ ಪ್ರಿಯಾತಿ ಪ್ರಿಯ ಶ್ರೀಮತಿಗೆ ಪ ತ್ರ ಬರೆಯತೊಡಗಿದೆ . ಬರೆಯಲು ವಿಷಯ ಹೆಚ್ಚು ಇದ್ದದ್ದರಿಂದ ಲೇಖನಿಯ ತುಂಬಾ ಶಾಯಿಯನ್ನು ತುಂಬಿಸಿದೆ. ಕಾಗದಗ ಮೇಲೆ ಮಧ್ಯ ಭಾಗದಲ್ಲಿ ಶ್ರೀರಾಮ ಎಂದು ಬರೆದು, ಬಲ ಭಾಗದ ತುದಿಯಲ್ಲಿ ದಿನಾಂಕ , ಮಾರ್ಚ್ ೩ ೧೯೭೧ ಎಂದು ಬರೆದೆ. ಪ್ರೀತಿಯ ಪತ್ನಿಯನ್ನು ಕಾವ್ಯ ರೂಪದಲ್ಲಿ ಸಂಬೋಧಿಸಿ, ಆ ದಿನದ ಪ್ರವಾಸದ ವಿವರಗಳನ್ನೆಲ್ಲಾ ಬರೆದು ಮಧ್ಯೆ ಮಧ್ಯೆ ನನ್ನನ್ನು ಕಾಡುತ್ತಿದ್ದ ಅವಳ ನೆನಪುಗಳು, ವಿರಹ ವೇದನೆಯನ್ನು ಸೇರಿಸಿ ಎಲ್ಲಾ ಬರೆಯುವುದರೊಳಗೆ ರಾತ್ರಿ ೧೧. ೩೦ ಆಗಿತ್ತು . ಮರುದಿನ ಬೇಗ ಏಳಬೇಕೆಂಬ ನೆನಪಾಗಿ ಬರೆಯುವುದ ನಿಲ್ಲಿಸಿ, ಮಲಗಿದೆ. ನನ್ನ ಮಂಚದಲ್ಲಿ ಮಲಗಿದ್ದ ರಾಜಾರಾಮ್ ಚೆನ್ನಾಗಿ ನಿದ್ದೆ ಮಾಡುತ್ತಿದ್ದವನು "ಏನೋ ಮೂರ್ತಿ ಪ್ರೇಮ ಪತ್ರ ಬರೆದ್ದದ್ದು ಆಯ್ತಾ" ಎಂದ. ನನ್ನ ಪೂರ್ತಿ ಹೆಸರು ಕೃಷ್ಣಮೂರ್ತಿ ಆದರೂ, ಸ್ನೇಹಿತರು ಅಡ್ಡ ಹೆಸರಾಗಿ ಮೂರ್ತಿ ಎನ್ನುತ್ತಿದ್ದರು. ಮನೆಯಲ್ಲಿ ಅಪ್ಪ, ಅಮ್ಮ ಮತ್ತು ತಂಗಿ ನನ್ನ ಹೆಸರಿನ ಮೊದಲರ್ಧಭಾಗವನ್ನು ವಿರೂಪ ಗೊಳಿಸಿ ಕಿಟ್ಟಿ ಎನ್ನುತ್ತಾರೆ, ಅಮ್ಮ ಕಿಟ್ಟಪ್ಪ ಎಂದರೆ, ತಂಗಿ ಕಿಟ್ಟಣ್ಣ ಎಂದು ಕರೆಯುವುದು ರೂಢಿ.
ತಾಜ್ ಮಹಲ್ ನೋಡಿ ಅದರ ಮುಂದೆ ನಿಂತು ಫೋಟೋ ತೆಗೆಸಿಕೊಂಡು, ಆಗ್ರಾದ ಪ್ರವಾಸದ ನಂತರ ದೆಹಲಿಗೆ ಬಸ್ಸಿನಲ್ಲಿ ಮರಳುತ್ತಿದ್ದೆವು. ರಾತ್ರಿ ಸುಮಾರು ಎಂಟರ ಸಮಯ, ನನ್ನ ಸ್ನೇಹಿತರೆಲ್ಲಾ ಸುಸ್ತಾಗಿ ನಿದ್ರಾಲೋಕಕ್ಕೆ ಪ್ರವೇಶಿಸಿದರೆ , ನಾನು ನನ್ನ ಪ್ರೇಮ ಲೋಕದಲ್ಲಿ ವಿಹರಿಸುತ್ತಿದ್ದೆ. ಪ್ರವಾಸಕ್ಕೆ ಬರುವ ಐದು ದಿನಗಳ ಮುಂಚೆಯಷ್ಟೇ ನನ್ನ ಮದುವೆ ಆದದ್ದು. ನಾವು ಬೆಂಗಳೂರಿನಲ್ಲಿ ನೆಲಸಿದ್ದರೂ ಅಮ್ಮ ನನಗೆ ರಾಮನಗರದ ಹುಡುಗಿಯನ್ನು ಆಯ್ಕೆ ಮಾಡಿದ್ದಳು. ಹೆಸರು ರಾಧಾ ರಮಣಿ , ಹುಡುಗಿಯನ್ನು ನೋಡದೆಯೇ ಒಪ್ಪಿಬಿಟ್ಟೆ. ರಾಧಾ-ಕೃಷ್ಣ ರ ಪ್ರೇಮ ಸಲ್ಲಾಪಗಳೇ ನೆನಪಾ ಗಿ ಪುಳಕಿತ ಗೊಂಡೆ. ನನ್ನವಳು ಸುರಸುಂದರಾಂಗಿ ಯಲ್ಲದಿದ್ದರೂ ನನ್ನ ಮಟ್ಟಿಗೆ ಮೋಹಕ ನಗುವಿನ ಚೆಲುವೆಯಾಗಿದ್ದಳು. ವರುಷ ಹದಿನಾರು ತುಂಬಿದ್ದರೂ ಹುಡುಗಾಟಿಕೆ ನಿಂತಿರಲಿಲ್ಲ , ಚೆಲ್ಲು ಚೆಲ್ಲಾಗಿ ಆಡುತಿದ್ದ ಚೆಂದುಳ್ಳಿ ಚೆಲುವೆಯಾಗಿದ್ದಳು. ನಿಶ್ಚಿತಾರ್ಥ ಮುಗಿದ ಕೂಡಲೇ ಮದು ವೆ ಏರ್ಪಾಟುಗಳು ಭರನೇ ಸಾಗಿದವು. ನಾನು ಕೆಲಸ ಮಾಡುತ್ತಿದ್ದ ಕಾರ್ಖಾನೆಯಿಂದ ಕಡಿಮೆ ಬಡ್ಡಿಗೆ ಸಾಲವು ದೊರೆಯಿತು. ನಾನು ಇಂಟರ್ಮೀಡಿಯೇಟ್ ಪಾಸಾದ ನಂತರ ನನ್ನ ಗೆಳೆಯನೊಬ್ಬ, ತನ್ನ ಕಾರ್ಖಾನೆಯಲ್ಲಿ ಅನೇಕ ಅವಕಾಶಗಳಿವೆ ಎಂದು ಹೇಳಿ ಅರ್ಜಿ ತಂದು ಕೊಟ್ಟ. ನನಗೆ ಸುಲಭವಾಗಿ ಕೆಲಸ ಸಿಕ್ಕಿತು . ಕೈ ತುಂಬ ಸಂಬಳ , ಸುಂದರ ಮಡದಿ, ಸ್ವರ್ಗಕ್ಕೆ ಕಿಚ್ಚು ಹಚ್ಚುವುದೇ ಬಾಕಿ . ಮದುವೆ ಮುಗಿದೊಡನೆ ಪ್ರವಾಸಕ್ಕೆ ಹೊರಡುವ ಗಡಿಬಿಡಿಯಲ್ಲಿ ಅವಳ ಜೊತೆ ಪ್ರೀತಿಯಿಂದ ಮಾತನಾಡಿರಲಿಲ್ಲ. ದೆಹಲಿಗೆ ಬಂದ ದಿನದಿಂದ ಪ್ರತಿನಿತ್ಯ ಪ್ರೇಮ ಪತ್ರ ಬರೆಯುವುದು ನನ್ನ ರೂಢಿಯಾಗಿತ್ತು. ನನ್ನ ಮೆದುಳಿನಲ್ಲಿದ್ದ ಶಬ್ದ ಭಂಡಾರವನ್ನೆಲ್ಲಾ ಪ್ರಯೋಗಿಸಿ, ನಾ ಓದಿದ ಕುವೆಂಪು,ಬೇಂದ್ರೆ, ಕೆ.ಎಸ್ . ಎನ್ , ಇತರ ಕವಿಗಳಿಂದ ಪ್ರೇರಿತನಾಗಿ, ಸರಸ ಸಲ್ಲಾಪಗಳ , ವಿರಹ ವೇದನೆಗಳ , ಚುಂಬನ ಆಲಿಂಗನಗಳ ಮಳೆಸುರಿಯುವಂತೆ ಬರೆಯುತ್ತಿದ್ದೆ . ಬರೆದದ್ದನ್ನು ಅಂಚೆ ಪೆಟ್ಟಿಗೆಯಲ್ಲಿ ಹಾಕುವ ಮುನ್ನ ಹತ್ತು ಬಾರಿ ಓದುತ್ತಿದ್ದೆ. ಅವಳು ಅದನ್ನು ಓದುವಾಗ ಕೆನ್ನೆ ಕೆಂಪಗಾಗುವುದನ್ನು ನೆನೆದು ರೋಮಾಂಚನ ಗೊಳ್ಳುತ್ತಿದ್ದೆ . ಈ ಪತ್ರಗಳನ್ನೆಲ್ಲ ಅವಳು ಜೋಪಾನವಾಗಿರಿಸಿ, ಮಕ್ಕಳು, ಮಮ್ಮೊಕ್ಕಳೊಂದಿಗೆ ಓದಿ " ನಿಮ್ಮ ಅಜ್ಜ ಆ ಕಾಲದಲ್ಲೇ ಎಂಥಾ ರಸಿಕರಾಗಿದ್ದರೆಂದರೆ .." ಎಂದು ಹೇಳುವುದನ್ನು ಕಲ್ಪಿಸಿಕೊಳ್ಳುತ್ತಿದ್ದೆ.ರಾತ್ರಿಯ ಹೊತ್ತಿನಲ್ಲಿ ಬಸ್ ಒಂದು ಕಡೆ ನಿಂತಿತು . ನಾನು ಮೂತ್ರ ವಿಸರ್ಜನೆ ಮಾಡಲು ಕೆಳಗಿಳಿದೆ, ನಾನು ಇಳಿದದ್ದನ್ನು ಗಮನಿಸದ ಚಾಲಕ , ಬಸ್ಸಿನಲ್ಲಿ ಎಲ್ಲರೂ ನಿದ್ರಿಸುತ್ತಿದ್ದರೆಂದು ತಿಳಿದು ಮುಂದೆ ಹೋಗಿ ಬಿಟ್ಟ . ನಾನು ಬಸ್ಸಿನ ಹಿಂದೆ ಓಡಿದೆ . ಪ್ರಯೋಜನ ವಾಗಲಿಲ್ಲ . ಸುತ್ತಲೂ ಕಗ್ಗತ್ತಲು, ಸುಮಧುರ ಬೃಂದಾವನದಲ್ಲಿ ರಾಧಾ ಕೃಷ್ಣರು ಒಬ್ಬರಮೇಲೊಬ್ಬರು ಬಣ್ಣ ಹಾಕಿಕೊಳ್ಳುತ್ತಿದ್ದ ದೃಶ್ಯಾವಳಿಗಳ ಕನಸಿನ ಲೋಕ ದಿಂದ ನೆಲಕ್ಕೆ ಬಿದ್ದಂತೆ ಭಾಸವಾಯಿತು. ಭಯ ಏನೆಂಬುದು ಅನುಭವವಾಗುತ್ತಿತ್ತು. ಕತ್ತಲೆಯ ನಡುವೆ ಮೈಲಿಗಲ್ಲೊಂದು ಕಂಡಿತು. ಜೇಬಿನಲ್ಲಿದ್ದ ಬೆಂಕಿಪಟ್ಟಣವನ್ನು ತೆಗೆದು ಒಂದು ಕಡ್ಡಿಯನ್ನು ಗೀರಿ ನೋಡಿದೆ(ಸಿಗರೇಟು ಸೇದುವ ಚಟ ವಿದ್ದ ಕಾರಣ ಜೇಬಲ್ಲಿ ಯಾವಾಗಲೂ ಬೆಂಕಿ ಪಟ್ಟಣ ಇರುತ್ತಿತ್ತು) . ದೆಹಲಿಗೆ ೧೫ ಕಿ.ಮೀ ಎಂದು ಬರೆದಿತ್ತು. ಅದೇ ರಸ್ತೆಯಲ್ಲಿ "ಹರೇ ರಾಮ..."ಎಂದು ಹೇಳಿಕೊಳ್ಳುತ್ತಾ ಹನುಮಾನ್ ಚಾಲೀಸಾ ಪಠಿಸುತ್ತ ನಡೆಯ ತೊಡಗಿದೆ. ಸ್ವಲ್ಪ ದೂರ ನಡೆದೊಡನೆ, ನನ್ನ ಬುದ್ದಿಗೆ ಏನೋ ಹೊಳೆಯಿತು , ಒಂದು ವೇಳೆ ನಾನು ರಸ್ತೆಯಲ್ಲಿ ಅಪಘಾತಕ್ಕೀ ಡಾದರೆ ????? ಆ ಆಲೋಚನೆಯೇ ನನ್ನ ಎದೆ ಬಡಿತವನ್ನು ಒಂದು ಬಾರಿ ನಿಲ್ಲಿಸಿತು . ಆ ಕ್ಷಣ ಸಾವೆಂದರೆ ಭಯವು ಶುರುವಾಯಿತು. ಜೇಬಿನಿಂದ ಒಂದು ಕಾಗದವನ್ನು ತೆಗೆದು ನನ್ನ ವಿಳಾಸವನ್ನು ಬರೆದು `ನಾನು ಅಕಸ್ಮಾತಾಗಿ ಮಾಡಿದರೆ ನನ್ನನ್ನು ಈ ವಿಳಾಸಕ್ಕೆ ಸೇರಿಸಿ` ಎಂದು ಬರೆದು ಮಡಚಿ ಜೇಬಿನಲ್ಲಿಟ್ಟುಕೊಂಡು ನಡೆಯಲಾ ರಂಭಿಸಿದೆ . ೨-೩ ಕಿ.ಮೀ ನಡೆಯುವುದರೊಳಗೆ ಒಂದು ಲಾರಿ ಕಾಣಿಸಿತು, ನನ್ನ ಕೈಯನ್ನಾಡಿಸಿ ನಿಲ್ಲಿಸಿದೆ. ನನ್ನ ಮುರುಕಲು ಹಿಂದಿಯಲ್ಲಿ ನನ್ನ ಪಾಡನ್ನು ವಿವರಿಸಿದೆ . ಆತನಿಗೆ ನನ್ನ ಮೇಲೆ ಕರುಣೆ ಉಕ್ಕಿ ಬಂದಿತು. ತನ್ನ ವಾಹನದಲ್ಲಿ ನನ್ನನ್ನು ಕುಳ್ಳರಿಸಿಕೊಂಡು ನಾವು ವಾಸವಿದ್ದ ಹೋಟೇಲಿನ ಹತ್ತಿರ ಬಿಟ್ಟ. ನಾನು ಅವನ ಕೈ ಕುಲುಕಿ ಧನ್ಯವಾದ ಹೇಳಿ ದುಡ್ಡು ಕೊಡಲು ಹೋದೆ . ಆತ ತೆಗೆದುಕೊಳ್ಳಲಿಲ್ಲ , ನಮಸ್ಕಾರ ಹೇಳಿ ಹೊರಟು ಹೋದ ನನ್ನ ಪಾಲಿಗೆ ಬಂದಿದ್ದ ಶ್ರೀ ಕೃಷ್ಣ ಪರಮಾತ್ಮ. ಅಲ್ಲಿ ಹೋಟೆಲ್ ನ ಎದುರಿಗೆ ಜಮಾಯಿಸಿದ್ದ ನನ್ನ ಸ್ನೇಹಿತರ ಗುಂಪು ನನ್ನನ್ನು ಕಂಡೊಡನೆ ಹರ್ಷಿಸಿದ್ದಲ್ಲದೆ ನೆಮ್ಮದಿಯ ನಿಟ್ಟುಸಿರನ್ನು ಬಿಟ್ಟರು. ರಾಜಾರಾಮ್ ನನ್ನನ್ನು ಗಟ್ಟಿಯಾಗಿ ತಬ್ಬಿಕೊಂಡು " ಎಲ್ಲೋ ಹೋಗಿದ್ದೆ, ಏನಾಯ್ತೋ ನಿನಗೆ , ನಾವೆಲ್ಲಾ ಎಷ್ಟು ಗಾಭರಿಯಾಗಿದ್ದೆವು ಗಾತ್ತಾ " ಎಂದೆಲ್ಲ ಅವರು ಪಟ್ಟ ಆತಂಕವನ್ನು ವಿವರಿಸಿದ .
ಎಂದಿನಂತೆ ಮಲಗುವ ಮುನ್ನ ಆ ದಿನನ ಅನುಭವವನ್ನೆಲ್ಲ ವರ್ಣ ರಂಜಿತವಾಗಿ ಪತ್ರದಲ್ಲಿ ಇಳಿಸಿ ಮರುದಿನ ಅಂಚೆ ಪೆಟ್ಟಿಗೆಯಲ್ಲಿ ಹಾಕುವುದ ಮರೆಯಲಿಲ್ಲ
ಪ್ರವಾಸ ಮುಗಿಯು ರೈಲಿನಲ್ಲಿ ಬೆಂಗಳೂರಿಗೆ ಬಂದು ಮನೆ ಸೇರಿದೆ, "ಅಮ್ಮ ಸ್ನಾನ ಮಾಡಿ ಬರುತ್ತೇನೆ , ಬೇಗ ತಿಂಡಿ ಮಾಡಿ ಕೊಡು , ರಾಮನಗರಕ್ಕೆ ಹೋಗುತ್ತೇನೆ" ಎಂದೆ . ಅಮ್ಮ "ಕಿಟ್ಟಪ್ಪ, ಈಗತಾನೇ ಬಂದದ್ದು , ಎಣ್ಣೆ ಸ್ನಾನ ಮಾಡೋ , ಸ್ವಲ್ಪ ವಿಶ್ರಾಂತಿ ತೊಗೊಂಡು ನಾಳೆ ಹೋಗುವೆಯಂತೆ " ಎಂದಳು. ನನ್ನ ತಂಗಿ ,ತನ್ನ ಕೋಣೆಯಿಂದಲೇ ಸ್ವಲ್ಪ ರಾಗವಾಗಿ ` "ಅಮ್ಮ ಈಗ ಅವನಿಗೆ ನಾವೆಲ್ಲಾ ಎಲ್ಲಿ ಕಾಣುತ್ತೇವೆ , ಅತ್ತಿಗೆ ಕೈಯಲ್ಲಿ ಎಣ್ಣೆ ಹಚ್ಚಿಸಿಕೊಳ್ಳುತ್ತಾನೆ ಬಿಡು" ಎಂದು ರೇಗಿಸಿದಳು. ಅವರ ಮಾತನ್ನು ಲೆಕ್ಕಿಸದೆ ಅವರಿಬ್ಬರಿಗೆ ತಂದಿದ್ದ ಉಡುಗೊರೆಗಳನ್ನು ಕೊಟ್ಟು, ನನ್ನ ಪ್ರೀತಿಯ ಮಡದಿಗೆ ತಂದಿದ್ದ ಬಳೇ ಇತ್ಯಾದಿಗಳನ್ನು ಹಿಡಿದುಕೊಂಡು ರಾಮನಗರಕ್ಕೆ ಹೊರಟೆ.
ನನ್ನನ್ನು ಕಂಡೊಡನೆ ಓಡೋಡಿ ಬಂದು ತಬ್ಬಿಕೊಳ್ಳುತ್ತಾಳೆಂಬ ಆಸೆಯಿಂದ, ನನ್ನ ಹಾಗೆ ತಾನೂ ವಿರಹ ವೇದನೆಯನ್ನನುಭವಿಸಿರುತ್ತಾಳೆಂಬ ನಂಬಿಕೆಯಿಂದ ಮಾವನ ಮನೆಯೊಳಗೆ ಹೊಕ್ಕೆ. ನನ್ನನ್ನು ಕಂಡ ಮಾವನವರು ಒಳಗೆ ಬರಮಾಡಿಕೊಂಡು, "ರಾಧಾ ಇಲ್ಲಿ ನೋಡು ಅಳಿಯಂದಿರು ಬಂದಿದ್ದಾರೆ ಬಾ " ಎಂದು ಕರೆದರು . ಅವಳು ಬಂದು ನನ್ನ ಪೆಟ್ಟಿಗೆ ತೆಗೆದು ಕೊಂಡು ತನ್ನ ಕೋಣೆಯ ಕಡೆ ನಡೆಯಲು, ನಾನು ಅವಳನ್ನು ಹಿಂಬಾಲಿಸಿದೆ. ಅವಳ ಮುಖದಲ್ಲಿ ಯಾವ ಭಾವನೆಯೂ ಕಾಣಲಿಲ್ಲ. ನಾನು ಎಣಿಸಿದಂತೆ ಏನೂ ನಡೆಯಲಿಲ್ಲ. ನಾನೇ ನನ್ನ ಪ್ರೇಮ ಪ ತ್ರಗಳ ಬಗ್ಗೆ ಪ್ರಸ್ತಾಪಿಸಿದೆ, ಅದಕ್ಕೂ ಹೇಚ್ಚೇನೂ ಪ್ರತಿಕ್ರಿಯೆ ಬರಲಿಲ್ಲ ,. " ನೀನು ನನ್ನ ಪತ್ರಗಳನ್ನು ಒದಲಿಲ್ಲವೇ "ಎಂದು ಕೇಳಿದೆ , "ಓದಿದೆ, ಅದೇನೋ, ಕಲಾ ಸುಂದರೀ, ಮಂಜರಿ, ಇನ್ನೂ ಏನೇನೋ ಇತ್ತು, ಅರ್ಥ ಆಗಲಿಲ್ಲ " ಎಂದು ತಲೆಯನ್ನು ಆಡಿಸುತ್ತಾ , ತನ್ನ ಜಡೆಯನ್ನು ಹೆಣೆದುಕೊಳ್ಳುತ್ತ ಹೇಳಿದಳು. ನನ್ನ ಮುಖ ಕೆಂಪಾಯಿತು. " ಹೋಗು ಅವನ್ನು ತೆಗೆದುಕೊಂಡು ಬಾ ನಾನು ವಿವರಿಸುತ್ತೇನೆ" ಎಂದೆ. ಆಗ ಅವಳು ಅಲ್ಲಿಂದ ಕದಲದೆ, ತಲೆ ಬಗ್ಗಿಸಿ ಬಲಗಾಲಿನ ಹೆಬ್ಬೆರಳಿನಿಂದ ನೆಲದ ಮೇಲೆ ಸೊನ್ನೆ ಗಳನ್ನೂ ಗೀಚುತ್ತ " ಆ ಪ ತ್ರಗಳನ್ನು ಯಾರಾದ್ರು ನೋಡಿದ್ರೆ ಚೆನ್ನಾಗಿರೊಲ್ಲ ಅಂತ ನೀರಲ್ಲಿ ಮುಳುಗಿಸಿ ಶಾಯಿಯೆಲ್ಲ ಹೋಗುವವರೆಗೂ ನೆನೆಸಿ, ಹಿಂಡಿ ಕಸದ ಬುಟ್ಟಿಗೆ ಹಾಕಿದೆ" ಎಂದಳು.
----೦-----
No comments:
Post a Comment