ಎಡ ತಿರುವನ್ನು ಕಂಡ ನಾನು ನನ್ನ ಕಾರನ್ನು ನಿಧಾನವಾಗಿ ಚಲಿಸುತ್ತಾ ಆಲೋಚಿಸ ತೊಡಗಿದೆ. ಸಂಜೆ ಐದು ಗಂಟೆಯಾಗಿತ್ತು .. ಮನೆಗೆ ಹೋಗುವ ದಾರಿಯದು. ಬೆಳಗಿನಿಂದ ಎರಡು ಶಸ್ತ್ರಚಿಕಿತ್ಸೆಗಳನ್ನು ಮಾಡಿದ ನನಗೆ ಆಯಾಸವಾಗಿತ್ತು. ಕಾರನ್ನು ಓಡಿಸುವಾಗಲು ಬಿಳಿಯ ಕೋಟನ್ನು ತೆಗೆದಿರಲಿಲ್ಲ. ಸ್ಟೆಥಾಸ್ಕೋಪನ್ನು ಮಾತ್ರ ಪಕ್ಕದಲ್ಲಿಟ್ಟು ಓಡಿಸುತ್ತಿದ್ದೆ. ಆ ಕ್ಷಣದಲ್ಲಿ ಥಟ್ಟನೆ ಪುಟ್ಟಣ್ಣನ ನೆನಪಾಯಿತು. ಎಡ ತಿರುವನ್ನು ತೆಗೆದು ಕೊಳ್ಳದೆ ಅದೇ ರಸ್ತೆಯಲ್ಲಿ ಮುಂದೆ ಹೋಗಿ ಬಲ ತಿರುವನ್ನು ತಗೆದುಕೊಂಡು ಇಂದಿರಾನಗರ ಸರ್ಕಾರಿ ಆಸ್ಪತ್ರೆಯ ಬಳಿ ಕಾರನ್ನು ನಿಲ್ಲಿಸಿ ಸ್ಟೆಥಾಸ್ಕೋಪನ್ನು ಕತ್ತಿಗೆ ನೇತು ಹಾಕಿಕೊಂಡು ಕಾರಿನಿಂದಿಳಿದು ಒಳ ಹೊಕ್ಕು ಎರಡನೆಯ ಮಹಡಿಯ ಜನರಲ್ ವಾರ್ಡ್ ಗೆ ಪ್ರವೇಶಿಸಿ ಪುಟ್ಟಣ್ಣನ ಮಂಚದ ಬಳಿ ಹೋದೆ. ಚಾರ್ಟನ್ನು ತೆಗೆದು ಓದಿದೆ. ಎಲ್ಲಾ ಅಂಗಗಳೂ ಕೆಲಸ ಮಾಡುವುದು ನಿಂತಿದೆ. ಒಮ್ಮೆ ಕಣ್ಣು ಮುಚ್ಚಿ ನಿಟ್ಟುಸಿರು ಬಿಟ್ಟೆ. ಒಂದೋ ಎರಡೂ ದಿನ ಅಷ್ಟೇ !
ಎರಡು ತಿಂಗಳ ಹಿಂದೆ ೭೦ ವರ್ಷದ ವೃದ್ಧರಾದ ಪುಟ್ಟಣ್ಣನನ್ನು ಈ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮಾಡಲು ಬಂದ ಹುಡುನ ಹೆಸರು ರಾಮಕೃಷ್ಣ , ಸುಮ್ಮರು ೧೭-೧೮ ವರ್ಷದ ವಯಸ್ಸಿನವನು. "ಇವರ ಅಸಲಿ ಹೆಸರೇನು? ಪುಟ್ಟಣ್ಣನೇ" ಎಂದು ನಾನವನನ್ನು ಕೇಳಿದೆ. ಅದಕ್ಕೆ ಅವನು "ಡಾಕ್ಟರ್ರೇ... ಇವರ ಅಸಲಿ ಹೆಸರೇನು ಅಂತ ನನಗೂ ಗೊತ್ತಿಲ್ಲ. ನಾನು ಇವರೊಟ್ಟಿಗೆ ಗಾಂಧಿ ಬಜಾರ್ ಹತ್ತಿರ ಒಂದು ಕೋಣೆಯಲ್ಲಿ ವಾಸವಾಗಿದ್ದೇನೆ . ಇವರು ನಮಗೆಲ್ಲಾ ಅಡುಗೆ ಹೇಳಿ ಕೊಡುವ ಹಿರಿಯ ಭಟ್ರು. ನನಗು ಇವರ ಬಗ್ಗೆ ಅಷ್ಟೇ ತಿಳಿದದ್ದು" ಎಂದು ಹೇಳಿದ್ದ . ಬಡಕಲು ದೇಹ ಕುರುಚಲು ಗಡ್ಡ, ನಾಲಕ್ಕೂವರೆ ಅಡಿ ಎತ್ತರದ ಬಳಲಿದ ಶರೀರ. ನಮ್ಮ ವೈದ್ಯಕೀಯ ವೃತ್ತಿಯಲ್ಲಿ ರೋಗಿಗಳನ್ನು ಒಂದು 'ಮಾದರಿ' ಎಂದೇ ಪರಿಗಳಿಸುವುದೇ ವಿನಃ ಅವರ ಬಗ್ಗೆ ಅನುಕಂಪ ಪ್ರೀತಿ , ವಿಶ್ವಾ ಸ ಸಲ್ಲದು. ನಾನು ವೈದ್ಯಕೀಯ ವೃತ್ತಿಯನ್ನು ಆಯ್ಕೆಮಾಡಲು ನನ್ನ ಅಜ್ಜಿಯೇ ಪ್ರೇರಣೆ , ಅದರಲ್ಲೂ ವೃದ್ಧರ ತಜ್ಞೆಯಾಗಲು ಅವರೇ ಕಾರಣ. ನಾನು ಸಣ್ಣವಳಾಗಿದ್ದಾಗ ಅಜ್ಜಿ ಮತ್ತು ನಾನು ಒಂದೇ ಕೋಣೆಯಲ್ಲಿ ಮಲಗು ತ್ತಿದ್ದೆವು. ನಾನೂ ಅಜ್ಜಿ ನಿದ್ದೆ ಬರುವವರೆಗೂ ಹರಟುತ್ತಿದ್ದೆವು . ನಾನು ಶಾಲೆಗೆ ಹೋಗುವಾಗ ಅವರೇ ನನಗೆ ಜಡೆ ಹೆಣೆಯಯಬೇಕು. ರಾತ್ರಿ ಮಲಗುವಾಗ "ಗುಡ್ ನೈಟ್ ಅಜ್ಜಿ" ಹೇಳಲೇ ಬೇಕು. ನಾವು ಬೆಂಗಳೂರಿನಲ್ಲಿದ್ದು ಅವರು ಮಂಗಳೂರಿಗೆ ಹೋದಾಗಲೂ , ನಾನು ಶಾಲೆಯಿಂದ ಪ್ರವಾಸಕ್ಕೆ ಹೋದಾಗಲೂ ರಾತ್ರಿ ಮಲಗುವಾಗ "ಗುಡ್ ನೈಟ್ ಅಜ್ಜಿ " ಎಂದು ಹೇಳಲೇ ಬೇಕು. ಅವರಿಗೂ ನಾನೆಂದರೆ ಅಷ್ಟೇ ಪ್ರೀತಿ. ಎಲ್ಲೂ ಹೆಚ್ಚು ದಿನ ನಿಲ್ಲುತ್ತಿರಲಿಲ್ಲ. ಒಂದೆರಡು ದಿನಗಳಲ್ಲಿ ವಾಪಸು ಬಂದು ಬಿಡುತ್ತಿದ್ದರು. "ಪಚ್ಛೇ ನಿನ್ನನ್ನು ಬಿಟ್ಟು ಇರಲು ಆಗಲಿಲ್ಲ ಅದಕ್ಕೆ ಬಂದು ಬಿಟ್ಟೆ" ಎನ್ನುತ್ತಿದ್ದರು. ಅಜ್ಜಿ ಮತ್ತು ಅಮ್ಮ ಮಾತ್ರ ನನ್ನನ್ನು ಪಚ್ಚಿ ಎಂದು ಕರೆಯುತ್ತಿದ್ದರು. ಅಪ್ಪ ಮಾತ್ರ ಪ್ರಶಾಂತೀ .. ಎಂದು ತೀ ಯನ್ನು ಎಳೆದು ಕರೆಯಿತ್ತಿ ದ್ದರು.
ನನ್ನನ್ನು ಅಷ್ಟು ಹಚ್ಚಿಕೊಂಡಿದ್ದ ಅಜ್ಜಿ ನಾನು ಏಳನೆಯ ತರಗರಿಯಲ್ಲಿ ಓದುತ್ತಿರುವಾಗ ನನ್ನನ್ನಗಲಿ ದೇವರಲ್ಲಿ ಐಕ್ಯವಾದರು . ನಾನು ಶಾಲೆಗೆ ಹೊರಡುವಾಗ ಜಡೆ ಹಾಕಿ "ಟಾಟಾ" ಹೇಳಿದ ಅಜ್ಜಿ ನಾನು ಬರುವ ವೇಳೆಗೆ ಆಸ್ಪತ್ರೆ ಸೇರಿದ್ದರು. ಹೃದಯಾಘಾತವಾಗಿದ್ದರಿಂದ ತೀವ್ರ ನಿಘಾ ಘಟಕದಲ್ಲಿರಿಸಿದ್ದರು. ಗಾಜಿನ ಕಿಟಕಿಯಿಂದ ಅವರನ್ನು , ಅವರ ಮೂಗಿಗೆ ಅಳವಡಿಸಿದ್ದ ಆಮ್ಲಜನಕ ಕೊಳವೆಗಳನ್ನು , ಕೈಗೆ ಚುಚ್ಚಿದ್ದ ಸೂಜಿಯನ್ನೂ ವೀಕ್ಷಿಸುತ್ತಿದ್ದೆ. ಆ ದೃಶ್ಯ ನನ್ನ ಕರುಳು ಕಿತ್ತುವಂತೆ
ಮಾಡಿತು. ಘಟಕ ದ ಹೊರಗೆ ಕೂತಿದ್ದ ನನ್ನನ್ನು ತಿಂಡಿ ತಿನ್ನಿಸಲು ಅಪ್ಪ ಹೊರಗೆ ಕರೆದುಕೊಂಡು ಹೋದರು ."ಅಪ್ಪಾ ಅಜ್ಜೀ ಗೆ ಏನೂ ಆಗೋ ಲ್ಲ ಅಲ್ವ, ಅವರು ಮೊದಲಿನಂತಾಗಿ ಮನೆಗೆ ಬರ್ತಾರಲ್ವಾ ಎಂದು ಕೇಳಿದೆ , ಅದಕ್ಕವರು "ಬರ್ತಾರೆ ಕಣೆ" ಎಂದು ಸುಮ್ಮನಾದರು. ನಾನು ಮಂಜುನಾಥ ದೇವರಿಗೆ ಹರಕೆ ಹೊತ್ತೆ "ಅಜ್ಜಿಯನ್ನು ಮೊದಲಿನಂತೆ ಮಾಡ ಪ್ಪ" ಎಂದು . ನಾವಿಬ್ಬರೂ ಮತ್ತೆ ಆಸ್ಪತ್ರೆಗೆ ಬಂದು ಗಾಜಿನ ಕಿಟಕಿಯ ಬಳಿ ಹೋದೆವು. ನರ್ಸ್ ಒಬ್ಬರು ಎಲ್ಲ ಕೊಳವೆಗಳನ್ನೂ , ಸೂಜಿಗಳನ್ನು ತೆಗೆಯುತ್ತಿದ್ದರು. ನನಗೆ ಮಂಜುನಾಥ ದೇವರು ಕರುಣಿಸಿದ, ಅಜ್ಜಿ ಇನ್ನೂ ಮನೆಗೆ ಹೊರಡಬಹುದು ಎಂದುಕೊಂಡೆ. ಅಪ್ಪ ನನ್ನ ಕೈಯನ್ನು ಗಟ್ಟಿಯಾಗಿ ಹಿಡಿದರು. ಸ್ವಲ್ಪ ಹೊತ್ತಿನ ನಂತರ ನನಗೆ ಒಳಗೆ ಹೋಗಲು ಅನುಮತಿ ಕೊಟ್ಟರು. ನಾನು ಅವರನ್ನು ಮುಟ್ಟಿದಾಗ ಮೈ ತಣ್ಣಗಾಗಿತ್ತು, ಕಣ್ಣು ಮುಚ್ಚಿತ್ತು. ಅಲ್ಲೇ ಹತ್ತಿರ ನಿಂತಿದ್ದ ಅಮ್ಮ ಅಳುತ್ತಿದ್ದುದನ್ನು ಕಂಡು ಏನಾಯಿತೆಂದು ಊಹಿಸಲು ಕಷ್ಟವಾಗಲಿಲ್ಲ . ಅಲ್ಲಿಂದ ಹೊರಗೆ ಓಡಿ ಹೋದೆ. ಅಳು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಪ್ರತಿ ದಿನ ರಾತ್ರಿ ನನ್ನ ಕೋಣೆ ಯಲ್ಲಿ ಒಬ್ಬಳೇ ಮಲಗುವಾಗಲೆಲ್ಲಾ ಅಳುತ್ತಿದ್ದೆ.ವೃದ್ಧರ ತಜ್ಞೆಯಾಗಿ ಎಲ್ಲರಲ್ಲೂ ಅಜ್ಜಿಯನ್ನು ನೋಡಲು ಶುರುಮಾಡಿದ ದಿನದಿಂದ ನನ್ನ ಅಳು ನಿಂತಿತು. ಈ ಪುಟ್ಟಣ್ಣನನ್ನು ಕಂಡ ಮೊದಲ ದಿನದಿಂದಲೂ ಅಜ್ಜಿಯ ನೆನಪುಗಳು ಕಾಡತೊಡಗಿದವು. ಯಾವ ಜನ್ಮದ ಅನುಬಂಧವೋ .. ಏನೋ ಅನುಕಂಪ . ಅವರು ಮಾತ್ರ ಒಂದು ಜೀವಚ್ಛವದಂತಿದ್ದರು ಅವರೊಡನೆ ಮಾತನಾಡಲೆತ್ನಿಸಿದೆ , ಕಣ್ಣು ತೆಗೆಯುವರು ಮುಚ್ಚುವರು ಅಷ್ಟೇ. ಅವರ ಕೈ ಗಳನ್ನೂ ಸ್ಪರ್ಶಿಸಿದೆ. ಮಡಿಕೆಗಳುಳ್ಳ ಒಣ ಚರ್ಮ ಅದರ ಹಿಂದೆ ಮೂಳೆಗಳು.. ಇನ್ನು ಅಲ್ಲಿ ನಿಲ್ಲಲು ಮನಸಾಗಲಿಲ್ಲ ಅಲ್ಲಿಂದ ಹೊರಟು ನನ್ನ ಕೋಣೆಗೆ ಬಂದು ಕುಳಿತುಕೊಂಡೆ .
ಡಾ||ರಾಜೇಶ್ ಬಂದು " ಏನ್ರೀ ಏನೋ ದೀರ್ಘವಾಗಿ ಯೋಚನೆ ಮಾಡ್ತಾ ಇರೋ ಹಾಗಿದೆ" ಎಂದು ಕೀಟಲೆ ಮಾಡಿದ. ಪುಟ್ಟಣ್ಣನ ಬಗೆಗಿದ್ದ ನನ್ನ ಭಾವನೆಗಳನ್ನು ಅವನೊಡನೆ ಹಂಚಿಕೊಂಡೆ , ಅದಕ್ಕವನು "ನೋಡು ಶಾಂತೀ ..ಅವರಿಗೆ ವಯಸ್ಸಾಗಿದೆ , ಹಿಂದೆ ಮುಂದೆ ಯಾರೂ ಇಲ್ಲ ಅಂತೀಯ , ಬೇಗ ಮುಕ್ತಿ ಸಿಗೋದೇ ಒಳ್ಳೆಯದಲ್ವಾ" ಎಂದ. ನಾನು " ಅದೇ ನನ್ನ ಕೊರಗು ಕೂಡ ಪಾಪ ಅವರಿಗೆ ಯಾರೂ ಇಲ್ಲ , ಅವರ ಅಂತ್ಯ ಕ್ರಿಯೆಗಳನ್ನು ಯಾರು ಮಾಡುತ್ತಾರೆ".
ಅಷ್ಟರಲ್ಲಿ ನನಗೊಂದು ಕರೆ ಬಂದಿತು, ಫೋನ್ ತೆಗೆದು , ಹಾಲೋ ಅಮ್ಮ ಎಂದೇ. ನಾನು ಫೋನಿನಲ್ಲಿರುವುದನ್ನು ಕಂಡು ರಾಜೇಶ್ ಕಣ್ಣು ಸನ್ನೆಯಿಂದ ಹೋರ ಡುತ್ತೇನೆ ಎಂದು ಹೇಳಿ ಅಲ್ಲಿಂದ ಹೊರಟ. ಅಮ್ಮ ನನ್ನ ಧ್ವಳಿಯಲ್ಲಿನ ನೋವನ್ನು ಕೇಳಿ , "ಪಚ್ಚಿ ಏನೇ ಆಯ್ತು, ಹಾಗಿದ್ದೀಯ? ಮತ್ತೆ ಯಾರಾದ್ರೂ ಹಿರಿಯ ವೈದ್ಯರು ಕಿರುಕಳ ಕೊಟ್ರಾ " ಎಂದು ಕೇಳಿದರು , " ಇಲ್ಲಮ್ಮ ಇಲ್ಲಿ ಒಬ್ಬ ರೋಗಿ ದಾಖಲಾ ಗಿದ್ದರೆ" ಎಂದು ಪುಟ್ಟಣ್ಣನ ವೃತ್ತಾಂತ ವನ್ನು ಹೇಳಿದೆ. ಅಮ್ಮನಿಗೆ ಏನಾಯ್ತೋ ಗೊತ್ತಿಲ್ಲ , "ಒಂದು ನಿಮಿಷ ಇರು ನಾನು ಮತ್ತೆ ಕರೆ ಮಾಡ್ತೀನಿ" ಎಂದು ಹೇಳಿ ಫೋನ್ ಇಟ್ಟರು.
ಕೆಲವೇ ನಿಮಿಷಗಳಲ್ಲಿ ಅಪ್ಪನ ಫೋನ್ ಬಂತು ` ಪ್ರಶಾಂತೀ .... ಪುಟ್ಟಣ್ಣ ಅಂತ ಯಾರೋ ದಾಖಲಾದರು ಎಂದು ಅಮ್ಮನ ಹತ್ರ ಹೇಳಿದೆ ಅಂತೇ ಅಲ್ವ, ಅವರ ವಿವರ ಕೊಟ್ಟ ಹುಡುಗನ ನಂಬರ್ ಇದ್ಯಾ , ಇದ್ರೆ ಕೊಡು" ಎಂದರು. ನಾನು ರಾಮಕೃಷ್ಣ ನ ನಂಬರನ್ನು ಕೊಟ್ಟೆ. ನನಗೆ ಏನೂ ಅರ್ಥ ವಾಗಲಿಲ್ಲ ., ಯಾಕಪ್ಪ ಅವರ ನಂಬರು ಎಂದು ಕೇಳಿದೆ, ಅದಕ್ಕವರು ನೀನು ಅಲ್ಲೇ ಇರು ನಾವು ಬರ್ತೇವೆ ಎಂದರು.
ಇನ್ನೊಂದು ಅರ್ಧ ಗಂಟೆಯಲ್ಲಿ ಅಪ್ಪ ಅಮ್ಮ ಇಬ್ಬರೂ ಬಂದರು. ನನಗೆ ಗೊಂದಲ ಹೆಚ್ಚಾಗುತ್ತಿತ್ತು . ಬಂದವರೇ," ಪುಟ್ಟಣ್ಣನಲ್ಲಿಗೆ ಕರೆದು ಕೊಂಡು ಹೋಗು" ಎಂದರು. ನಾವು ಮೂರು ಜನ ಅವರಲ್ಲಿಗೆ ಹೋದಮೇಲೆ, ಅಪ್ಪ ಪುಟ್ಟಣ್ಣನನ್ನು ಪರೀಕ್ಷಿಸಿ ನೋಡಿ ಒಂದು ನಿಶ್ಚಯಕ್ಕೆ ಬಂದಂತೆ ಕಂಡರು . ನಾನು ಆಶ್ಚರ್ಯ ಪಡುತ್ತಲೇ , " ಅಮ್ಮ ಏನಾಯ್ತು ಯಾರಿವರು" ಎಂದು ಕೇಳಿದೆ. ಅಮ್ಮ "ಪಚ್ಚಿ ನಿನಗೆ ನೆನಪಿದೆಯಾ , ನಮ್ಮ ಮನೇಲಿ ಗೋಕುಲಣ್ಣ ಅಂತ ಅಜ್ಜಿಯ ಅಣ್ಣನ ಮಗ ಇದ್ದರು... ಅವರಿಗೆ ಮದುವೆ ಆಗಿರಲಿಲ್ಲ .." ಎಂದರು. ನನಗೆ ನೆನಪಿಸಿಕೊಳ್ಳಲು ಕಷ್ಟವಾಗಲಿಲ್ಲ . ನಾನು ಹುಟ್ಟಿದಾಗ ಅವರು ನಮ್ಮ ಮನೆಯಲ್ಲಿ ಇದ್ದರಂತೆ. ನನ್ನನ್ನು ಯಾವಾಗಲು ತಮ್ಮ ಕಂಕುಳಲ್ಲಿ ಎತ್ತಿಕೊಂಡಿರುತ್ತಿದ್ದರಂತೆ. ನನಗೆ ಸಣ್ಣ ಪೆಟ್ಟಾದರೂ ತಮಗೇ ಆದಷ್ಟು ನೊಂದುಕೊಳ್ಳುತ್ತಿದ್ದರು. ಒಮ್ಮೆ ಮಕ್ಕಳೆಲ್ಲರ ಜೊತೆಯಲ್ಲಿ ದೀಪಾವಳಿ ಹಬ್ಬ ಆಚರಿಸುತ್ತಾ ನನ್ನ ಕೈ ಸುಟ್ಟಿತು, ನಾನು ಚೀರಿದ್ದನ್ನು ಕಂಡು ಓಡಿ ಹೋಗಿ ಎಣ್ಣೆಯನ್ನು ತಂದು ಹಚ್ಚಿ ಉಪಚಾರ ಮಾಡಿ ನಾನು ನಿದ್ದೆ ಮಾಡುವವರೆಗೂ ನನ್ನ ಜೊತೆ ಇದ್ದರು. ಎಲ್ಲೋ ಇದ್ದವರು ಒಮ್ಮೆ ನಮ್ಮ ಮನೆಗೆ ಬಂದರು ಸ್ವಲ್ಪ ದಿನ ಇದ್ದು ಹಠಾತ್ತನೆ ಎತ್ತಲೋ ಹೋಗಿಬಿಟ್ಟರು. ಅಪ್ಪ ಅವರನ್ನು ಹುಡುಕಲು ಮಾಡಿದ ಪ್ರಯತ್ನ ಅಷ್ಟಿಷ್ಟಲ್ಲ. ಅವರು ನಮ್ಮ ಮನೆಯಲ್ಲಿ ಇದ್ದಾಗ ಅಡುಗೆ ಕೋಣೆ ಅವರಿಗೆ ಅರಮನೆ . ರುಚಿ ರುಚಿಯಾದ ಅಡುಗೆ ಮಾಡುತ್ತಿದ್ದರು. ನಮ್ಮ ಮನೆಯಲ್ಲಿ ಸಣ್ಣ ಮಟ್ಟ ಗಿನ ಪೂಜೆ ಏನಾದ್ರೂ ಇದ್ದರೆ ಅವರೇ ಅಡುಗೆ ಮತ್ತು ಬಡಿಸುವ ಜವಾಬ್ದಾರಿ ತೆಗೆದುಕೊಳ್ಳುತ್ತಿದ್ದರು. ಮನೆಗೆ ಯಾರಾದ್ರೂ ಬಂದರೆ, "ಗೋಕುಲಣ್ಣ ಇದ್ದಾರಾ ..ಹಾಗಾದ್ರೆ, ಊಟ ಮಾಡಿಯೇ ಹೋರಡುತ್ತೇವೆ" ಎನ್ನುತ್ತಿದ್ದರು.
ನಾವು ಮೂರು ಜನ ನನ್ನ ಕೋಣೆ ಗೆ ಬಂದು ಅವರ ನೆನಪುಗಳನ್ನು ಮೆಲಕು ಹಾಕುತ್ತ ಕೂತಿದ್ದೆವು. ಅಷ್ಟರಲ್ಲಿ ನರ್ಸ್ ಓಡಿ ಬಂದು " ಡಾಕ್ಟರ್ರೇ ..ಪುಟ್ಟಣ್ಣ ..".ಎಂದು ಏನೋ ಹೇಳತೊಡಗಿದರು , ನಾವು ಅಲ್ಲಿಗೆ ಹೋದೆವು. ಅಷ್ಟರಲ್ಲಿ ಅವರ ಪ್ರಾಣ ಹಕ್ಕಿ ಹಾರಿ ಹೋಗಿತ್ತು. ಗೋಕುಲ ಧಾಮಕ್ಕೆ ಪಯಣ ಬೆಳಸಿದ್ದಾಗಿತ್ತು.
No comments:
Post a Comment