Saturday, February 2, 2013

ಪ್ರೇಮ ಪತ್ರ

  ಪ್ರಿಯೆ ,
  ಈ ಪ್ರೇಮ  ಪತ್ರವನ್ನು ನಿನಗಾಗಿ ನಾನು ಬರೆಯಲು ಸರಿಯಾಗಿ 1 ವರ್ಷ 3 ತಿಂಗಳು 16 ದಿನಗಳು ಬೇಕಾಯಿತು. ಇಂದು ನನ್ನ ಹೃದಯದಾಳದ ಪ್ರೀತಿಯನ್ನು  ವ್ಯಕ್ತ ಪಡಿಸುವ ಸಾಹಸವನ್ನು ಮಾಡುತ್ತಿದ್ದೇನೆ.
ಅಂದು ಡಿಸೆಂಬರ್ 1, 2010, ಬುಧವಾರ ಬೆಳಗ್ಗೆ ಸುಮಾರು 8.00 ಗಂಟೆಯ ಸಮಯ. ನಾನು ನನ್ನ ಆಫೀಸಿನ ಕ್ಯಾಬ್‍ಗಾಗಿ ಕಾಯುತ್ತಾ ನಿಂತಿದ್ದೆ. ನನ್ನನ್ನು ಯಾರೋ ಕರೆದಂತಾಗಿ ಹಿಂದಿರುಗಿ ನೋಡಿದೆ, ನನ್ನನ್ನು ಯಾರೂ ಕರೆದಿರಲಿಲ್ಲ ಆದರೆ... ಅಲ್ಲಿ ನಿನ್ನನ್ನು  ಮೊದಲಬಾರಿ ಕಂಡೆ, ಹಳದಿ ಮತ್ತು ಕಂದು ಬಣ್ಣ ಮಿಶ್ರಿತ ಸಲ್ವಾರ್ ಧರಿಸಿದ್ದ ನೀನು ನನ್ನ ನೋಡಿ ಕಿರು ನಗೆ ಬೀರಿದಂತೆ ಭಾಸವಾದರೂ  ನನ್ನ ಭ್ರಮೆಯೇನೋ ಎಂದು ತಿಳಿದು ಸುಮ್ಮನಾದೆ. ಮೊದಲನೆಯ ನೋಟದಲ್ಲೇ ಆಕರ್ಷಿತನಾಗಿದ್ದೆ, ನಿನ್ನನ್ನು ಮತ್ತೆ ನೋಡಬೇಕೆಂಬ ಬಯಕೆಯನ್ನು ಬಲವಂತವಾಗಿ ತಡೆದುಕೊಂಡು ನೀನು 138 ನಂ. ಬಸ್ಸನ್ನು ಹತ್ತಿ ಹೋಗುವುದನ್ನು  ನೋಡುತ್ತಾ ಮೈ ಮರೆತು ನಿಂತಿದ್ದೆ. ನನ್ನ ಕ್ಯಾಬ್ ನ ಹಾರನ್ ನಿಂದ ಎಚ್ಚೆದ್ದು ಕಾರಿನಲ್ಲಿ ಹೋಗಿ ಕುಳಿತೆ.

 ಮರು ದಿನವೂ ನಿನ್ನನ್ನು ಅದೇ ಸ್ಥಳದಲ್ಲಿ ನೋಡಿದಾಗ ನನಗಾದ ಆನಂದ ಹೇಳತೀರದು. ಮತ್ತೆ ಮತ್ತೆ ನೋಡುವಾಸೆ, ನೋಡಿದಷ್ಟೂ ಮನವು ಕುಣಿದು ಕುಪ್ಪಳಿಸುತ್ತಿತ್ತು. ನಿನಗೆ ಕಾಣದಂತೆ ದೂರದಲ್ಲಿ ನಿಂತು ನಿನ್ನನ್ನು  ದಿನವೂ ಗಮನಿನತೊಡಗಿದೆ. ಕಪ್ಪು ಕೂದಲು, ಅತಿ ಉದ್ದವೂ ಅಲ್ಲದ ಅತಿ ಗಿಡ್ಡವೂ ಅಲ್ಲದ ದಪ್ಪನೆಯ ಜಡೆ, ನಿನ್ನ ಮೈ ಬಣ್ಣಕ್ಕೆ ಒಪ್ಪುವ ನಿನ್ನ ಉಡುಪು, ತೀಡಿದಂತಿದ್ದ ನಿನ್ನ ಹುಬ್ಬುಗಳು, ಹಣೆಯ ಮೇಲೆ ಕಪ್ಪು ಬೊಟ್ಟು, ಬಲಗೈಯಲ್ಲೊಂದು ಚಿನ್ನದ ಬಳೆ, ಎಡಗೈಗೊಂದು ರಿಸ್ಟ್ ವಾಚ್,  ಎದೆಗಪ್ಪಿ ಹಿಡಿದ ಲಾಂಗ್ ನೋಟ್ ಬುಕ್, ಹೆಗಲಲ್ಲಿ ಕಾಲೇಜು ಬ್ಯಾಗು. ದಂತದ ಗೊಂಬೆಯಂತೆ ಕಾಣುತ್ತಿದ್ದೆ.  ಜೀನ್ಸ್ ಪ್ಯಾಂಟ್ ತೊಟ್ಟು ಕೂದಲನ್ನು ಹಾಗೆ ಬಿಟ್ಟು ಆಗಾಗ ತಲೆಗೂದಲನ್ನು ನೇವರಿಸಿಕೊಳ್ಳುತ್ತಾ , ಇಂಗ್ಲೀಷ್ ನಲ್ಲಿ  ಹರಟುತ್ತಾ ನಿಂತಿದ್ದ ಹುಡುಗಿಯರ ನಡುವೆ ಇದ್ದ ನೀನು ಪಾಶ್ಚಿಮಾತ್ಯ ಸಂಸ್ಕೃತಿ ಯ ನಡುವೆ ಭಾರತೀಯ ಸಂಪ್ರದಾಯ-ಸಂಸ್ಕಾರ ಎತ್ತಿ ಕಾಣುವಂತಿದ್ದೆ . ಎಲ್ಲಕ್ಕಿಂತ ನನಗೆ ಮೆಚ್ಚುಗೆಯಾದದ್ದು ನಿನ್ನ ಮೌನ. ನಿನ್ನಷ್ಟಕ್ಕೆ ನೀನು ನಿಂತಿದ್ದು, ಪರಿಚಿತರಿಗೆ ಮಾತ್ರ ನೀಡುತ್ತಿದ್ದ ಕಿರು ನಗೆ ನನ್ನ ಮನವನ್ನು ಅಪಹರಿಸಿತ್ತು.
ಅಂದು ಜೂನ್ 24, 2011, ಎಂದಿನಂತೆ ನಾನು ನನ್ನ ಕಾರಿಗಾಗಿ ನೀನು ನಿನ್ನ ಬಸ್ಸಿಗಾಗಿ ಕಾದು ನಿಂತಿದ್ದಾಗ ಆಕಸ್ಮಿಕವಾಗಿ ನಿನ್ನ ಕೈಯಲ್ಲಿದ್ದ ಪುಸ್ತಕ ಜಾರಿ ಬಿತ್ತು. ಅದನ್ನು ನನ್ನ ಪಕ್ಕದ ವ್ಯಕ್ತಿ ತೆಗೆದು ಕೊಡುವಾಗ ನಿನ್ನ ಕಾಲೇಜಿನ ಹೆಸರನ್ನು ಓದಿದೆ. “ಜ್ಞಾನ ಜ್ಯೋತಿ  ಕಾಲೇಜು, ಬಸವೇಶ್ವರ ನಗರ, ಬೆಂಗಳೂರು”. ಅಂದೇ ಅಂತರ್ಜಾಲದಲ್ಲಿ ಕಾಲೇಜಿನ ವಿಳಾಸವನ್ನು ಪತ್ತೆ
ಹಚ್ಚಿ , ಕಾಲೇಜು ಬಿಡುವ  ಸಮಯಕ್ಕೆ ಸರಿಯಾಗಿ ನಿನಗಾಗಿ ನಿನ್ನ ಕಾಲೇಜಿನ ಎದುರು ಕಾದೆ. 3-4 ದಿನಗಳ ದೀರ್ಘ ನಿರೀಕ್ಷಣೆಯ ನಂತರ ನಿನ್ನನ್ನು ಕಂಡೆ. ನಿನ್ನ ಗೆಳತಿಯರೊಡನೆ ಹೋಗುತ್ತಿದ್ದೆ, ಕೈ ಸನ್ನೆಗಳನ್ನು ಮಾಡುತ್ತಾ ಏನನ್ನೋ ಅರ್ಥೈಸುತ್ತಿದ್ದೆ. ಆರು ತಿಂಗಳಿನಿಂದ ಬಸ್ ನಿಲ್ದಾಣದಲ್ಲಿ ನೀನು ಮೌನವಾಗಿ ನಿಂತಿರುತ್ತಿದ್ದುದು, ಕಿರು ನಗೆ ಬೀರುತ್ತಿದ್ದುದು ನೆನಪಾಯಿತು. ನಿನಗೆ ಮಾತು ಬಾರದು, ಕಿವಿ ಕೇಳದು, ಜ್ಞಾನ ಜ್ಯೋತಿ ಕಾಲೇಜು ನಿನ್ನಂಥವರಿಗೆ ಮೀಸಲಾದದ್ದು ಎಂದು ತಿಳಿದು ಕ್ಷೋಭೆಯನ್ನನುಭವಿಸಿದೆ. 2-3 ದಿನ ನಿದ್ದೆ ಸರಿಯಾಗಿ ಬರಲಿಲ್ಲ, ಆಫೀಸಿನಲ್ಲೂ ಮಂಕಾಗಿ ಯಾರ ಜೊತೆಯೂ ಮಾತನಾಡದಿರುತ್ತಿದ್ದೆ. ಮಾತನಾಡದಿರುವುದು ಎಷ್ಟು ಕಷ್ಟಕರವೆಂಬುದನರಿತೆ. ನಿನ್ನ ನಗುವು ನನ್ನನ್ನು ಮಂತ್ರಮುಕ್ತನನ್ನಾಗಿಸಿತು. ನಿನ್ನ ಬಗ್ಗೆ ಪ್ರೀತಿ , ನಿನ್ನನ್ನು ಪಡೆಯುವ ಹಂಬಲ ಹೆಚ್ಚಿತು. ನನ್ನ ಸ್ನೇಹಿತರ ಸಹಾಯದಿಂದ ವೈದ್ಯರನ್ನು ಸಂಪರ್ಕಿಸಿ, "ತಾಯಿಗೆ ಮಾತು ಬಾರದಿದ್ದರೆ ಮಗುವಿಗೂ ಮಾತು ಬರದೇ ಹೊಗುವುದಾ?" ಇನ್ನಿತರ ಸಂದೇಹಗಳನ್ನು ಬಗೆಹರಿಸಿಕೊಂಡೆ. ಅಂತರ್ಜಾಲದ ಮೂಲಕ, ಪುಸ್ತಕಗಳ ಮೂಲಕ “ಸೈನ್ ಭಾಷೆ” ಯನ್ನು ಕಲಿಯಲು ಪ್ರಾರಂಭಿಸಿದೆ. ನಿನ್ನನ್ನು ಮದುವೆಯಾದರೆ ನಮ್ಮ ಸಂಸಾರ ಹೇಗಿರಬಹುದೆಂದು ಊಹಿಸಿಕೊಳ್ಳುತ್ತಾ  ನಿನಗೆ ನನ್ನ ಪ್ರೀತಿಯನ್ನು ಹೇಗೆ ವ್ಯಕ್ತಪಡಿಸಬೇಕೆಂಬುದರ ಬಗ್ಗೆ ಚಿಂತಿಸುತ್ತಿದ್ದೆ.
ನನ್ನ ಆಪ್ತ ಮಿತ್ರನ ಬಳಿ ನಿನ್ನ ಬಗ್ಗೆ  ಹೇಳುತ್ತಿದ್ದೆ. ಆತ ನನಗೆ ಸೂಕ್ತ ಸಲಹೆಗಳನ್ನು ನೀಡುತ್ತಾ ನನ್ನನ್ನು ಪ್ರೋತ್ಸಾಹಿಸುತ್ತಿದ್ದ. ಒಮ್ಮೊಮ್ಮೆ ತಮಾಷೆ ಮಾಡುತ್ತಿದ್ದ,  ‘ನೀನು ತುಂಬಾ ಲಕ್ಕೀ ಮಾರಾಯ, ಹೆಂಡತಿಯ ಬೈಗಳಿಂದ ತಪ್ಪಿಸಿಕೊಂಡೆ’ ಎಂದು ಹೇಳಿ ನನ್ನನ್ನು ಕಂಡು ಅಸೂಯೆ ಪಡುತ್ತಿದ್ದ. ಆತ ತನ್ನ ಹೇಂಡತಿಯ ಮಾತುಗಳಿಂದ ಬೇಸತ್ತು ‘ಹೆಂಡತಿ...ಪ್ರಾಣ ಹಿಂಡುತಿ..’ ಎಂಬ ದಾಸರ ಪದವನ್ನು ನೆನಪಿಸಿಕೊಳ್ಳುತ್ತಿದ್ದ. ನಾನು ಮಾತ್ರ ಇದ್ಯಾವುದನ್ನೂ ನಿನ್ನ ಬಳಿ ವ್ಯಕ್ತಪಡಿಸದೆ ಊಹಾಲೋಕದಲ್ಲೇ ವಿಹರಿಸುತ್ತಿದ್ದೆ. ನಾನು ನಿನ್ನನ್ನು ಪ್ರೀತಿಸಿದ್ದು ನಿಜ ಆದರೆ ನಿನಗೂ ನನ್ನ ಬಗ್ಗೆ ಇದೇ ಅಭಿಪ್ರಾಯವಿದಯೇ ? ನಿನ್ನ ನಗುವನ್ನು ಅಪಾರ್ಥ ಮಾಡಿಕೊಂಡಿದ್ದೀನಾ ? ಒಂದು ವೇಳೆ ನನ್ನ ಪ್ರೀತಿಯನ್ನು ವ್ಯಕ್ತ ಪಡಿಸಿದರೆ ಬಸ್ ನಿಲ್ದಾಣದಲ್ಲೇ ಕಪಾಳಮೋಕ್ಷವಾಗುತ್ತದೆಯಾ ? ಎಂಬ ಯೋಚನೆಗಳ ನಡುವೇ 1 ವರ್ಷ 3 ತಿಂಗಳು ಕಳೆದೆ.
ಮಾರ್ಚ್ 5 2012. ನಾನು ಗೋಡೆಗೆ ಒರಗಿ ದಿನಪತ್ರಿಕೆಯನ್ನು ಓದುತ್ತಾ ನಿಂತಿದ್ದೆ. ನೀನು ಬಂದದ್ದು ಗಮನಿಸಿದರೂ ಗಮನಿಸದಂತಿದ್ದೆ. ಆಕಾಶ ನೀಲಿ ಬಣ್ಣದ ಸಲ್ವಾರ್, ಅದಕ್ಕೆ ಮ್ಯಾಚಿಂಗ್ ಬಳೆ, ಕಿವಿ ಓಲೆಗಳು. ಏನೋ ವಿಶೇಷವಿರಬೇಕೆಂದು ಊಹಿಸುತ್ತಿರುವಾಗಲೇ ನನ್ನ ಬಳಿ ಬಂದೆ. ನನ್ನ ಎದೆ ಮಿಡಿತ ಹೆಚ್ಚಿತು, ಪತ್ರಿಕೆಯನ್ನು ಪಕ್ಕಕ್ಕೆ ಸರಿಸಿ ನೋಡಿದರೆ... ಅದೇ ಮುಗುಳ್ನಗೆ ಬೀರಿ ನಿನ್ನ ಬ್ಯಾಗಿನಿಂದ ‘ನಂದಿನಿ ಮೈಸೂರು ಪಾಕ್’ ಡಬ್ಬಿಯನ್ನು ತೆಗೆದು  ಸ್ವೀಕರಿಸುವಂತೆ ಸನ್ನೆ ಮಾಡಿದೆ. ನನ್ನ ಸಂತೋಷಕ್ಕೆ ಪಾರವಿಲ್ಲದಾಯಿತು. ದೇವರು ನನ್ನ ತಪಸ್ಸಿಗೆ ಮೆಚ್ಚಿದನೆಂದೆನಿಸಿತು.

ಅದೇ ನಗು...ನನ್ನನ್ನು ಮೋಡಿಮಾಡಿದ, ನಿದ್ದೆ ಕೆಡಿಸಿದ, ಹೃದಯವನ್ನು ಹಿಂಡಿದ ನಗು. ನಿನ್ನ ತುಟಿಗಳನ್ನೇ ಗಮನಿಸುತ್ತಿದ್ದೆ, ಆಗ ಹೊರಳಿತು ನಿನ್ನ ಬಾಯಿಂದ ಮಾತುಗಳು, ‘ ನಾನು...ಸಾಗರ್ ನ ಕಜಿನ್ .. ಸುಪ್ರೀತ ಅಂತ... ಈ ದಿನ ನನ್ನ ಹುಟ್ಟು ಹಬ್ಬ’ ಎಂದು ಮಂದಹಾಸ ಬೀರುತ್ತಾ ಅತಿ ಸಲಿಗೆಯಿಂದಾಡಿದ ಮಾತುಗಳಿಗೆ ಸ್ತಬ್ಧನಾಗಿ ನಿಂತೆ 'ಹಲೋ....ನೀವು ಕಿಶೋರ್ ಅಲ್ವಾ ?’ ಎಂದಾಗ ಎಚ್ಚೆದ್ದೆ.  ‘ನಿಮಗೆ ಮಾತನಾಡಲು ಬರುತ್ತಾ ?’ ಎಂದು ಕೇಳಬೇಕೆನಿಸಿದರೂ ಕೇಳದೆ  ‘ಒಂದು ನಿಮಿಷ ಇಲ್ಲೇ ನಿಲ್ಲಿ’ ಎಂದು ಹೇಳಿ ಪಕ್ಕದಲ್ಲೇ ಇದ್ದ ಹೂವಿನಂಗಡಿಯಿಂದ ಗುಲಾಬಿಯನ್ನು ತಂದುಕೊಟ್ಟು ‘ಮೆನಿ ಮೆನಿ ಹ್ಯಾಪಿ ರಿಟರ್ನ್ಸ್ ಆಫ್ ದ ಡೇ’ ಎನ್ನುವುದರೊಳಗೆ  ನಿನ್ನ ಬಸ್ ಬಂದು ಹೊರಟು ಹೋದೆ. ಆದರೆ.. ಆ ಕ್ಷಣ ನನ್ನ ಮನದಲ್ಲಾದ ಕಳವಳ, ಸಂತೋಷ, ಆಶ್ಚರ್ಯ...ನೂರಾರು ಭಾವಗಳು ವರ್ಣನಾತೀತ. ಆದರೀಗ ನಿನಗೂ ನನ್ನ ಬಗ್ಗೆ ಒಲವಿರುವುದನ್ನರಿತೆ. ನನ್ನ ನಂಬಿಕೆ ನಿಜವಾದರೆ , ನಾನು ನಿನಗೆ ಒಪ್ಪಿಗೆಯಾದರೆ ನಾಳೆ  ಹಳದಿ-ಕಂದು ಮಿಶ್ರಿತ ಸಲ್ವಾರ್ ಧರಿಸಿ ಬಾ. ನಿನಗಾಗಿ ಕಾದಿರುತ್ತೇನೆ.

ನಿನ್ನ ಪ್ರೀತಿಯ

ಕಿಶೋರ್
16-3-2012

 -------------------------------------xxxxxxxxxxxxx--------------------------------------


photo courtesy: google images

No comments:

Post a Comment